

ದಾವಣಗೆರೆ : ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ನೀಡುವ ಕರ್ನಾಟಕ ಛಾಯಾರತ್ನ ಪ್ರಶಸ್ತಿಗೆ ಛಾಯಾಗ್ರಾಹಕರಾದ ದಾವಣಗೆರೆಯ ಎಂ.ಮನು ಹಾಗೂ ಹರಿಹರ ತಾಲೂಕು ಕೊಂಡಜ್ಜಿಯ ಎಸ್. ರಾಜಶೇಖರ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಜೂ. 23ರಂದು ಆರಂಭವಾಗಲಿರುವ ಫೋಟೋ ಟುಡೆ ಕಾರ್ಯಕ್ರಮ-ವಸ್ತು ಪ್ರದರ್ಶನ ಸಂದರ್ಭದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ವಿಶ್ವಮಾನವ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಸ್.ಎಲ್.ಆನಂದಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಂ.ಮನು ದಾವಣಗೆರೆ ತಾಲೂಕು ಪೋಟೋ ಮತ್ತು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿಯೂ, ವಿ. ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾಗಿ ಇತರೆ ಸಂಘಟನೆಗಳಡಿ ಗುರುತಿಸಿಕೊಂಡಿದ್ದಾರೆ. ರಾಜಶೇಖರ ಕೂಡ ದಾವಣಗೆರೆ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಇತರೆ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಛಾಯಾಗ್ರಾಹಕರಿಗೆ ಪ್ರತ್ಯೇಕ ಕಾಲನಿ ನಿರ್ಮಾಣ ಮಾಡುವಂತೆ ಅನೇಕ ಬಾರಿ ಸಂಘದಿಂದ ಮನವಿ ಸಲ್ಲಿಸಿದ್ದರೂ ಫಲಪ್ರದವಾಗಿಲ್ಲ. ಜಿಲ್ಲಾ ಸಚಿವರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ತಾಲೂಕು ಪೋಟೋ ಮತ್ತು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಬಿ.ಮಂಜುನಾಥ ಮಾತನಾಡಿ ಅನೇಕ ಪ್ರಶಸ್ತಿ ಪುರಸ್ಕೃತರ ಸಂಭ್ರಮವನ್ನು ಸೆರೆ ಹಿಡಿಯುವ ಛಾಯಾಗ್ರಾಹಕರನ್ನು ಸರ್ಕಾರ, ಸಂಘ ಸಂಸ್ಥೆಗಳು ಹೆಚ್ಚು ಗುರುತಿಸುವ ಕೆಲಸ ಮಾಡುತ್ತಿಲ್ಲ ಎಂದು ವಿಷಾದಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿಚಂದ್ರನ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಕೋಟಿಹಾಳ್ ಸಿದ್ದೇಶ್, ಹಿಮಾಲಯನ್ ಅಡ್ವೆಂಚರ್ ಆ್ಯಂಡ್ ನೇಚರ್ ಅಕಾಡೆಮಿ ಕಾರ್ಯದರ್ಶಿ ಎನ್.ಕೆ. ಕೊಟ್ರೇಶ್, ನಾಗರಾಜ್ ಎ.ಕೆ. ಹಟ್ಟಿ, ಅಕ್ಬರ್, ಅಸ್ಗರ್ ಇದ್ದರು.
--