

ಮೈಸೂರು: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ವತಿಯಿಂದ ಪ್ರಸಕ್ತ ಸಾಲಿನ ಎಂ.ಎ, ಎಂ.ಕಾಂ, ಎಂಬಿಎ, ಎಂಎಸ್‌ಸಿ, ಎಂಸಿಎ ಸೇರಿದಂತೆ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ.
ಈಗಾಗಲೇ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಮತ್ತು ಅಂತಿಮ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಫೆ.1ರಂದು ರಾತ್ರಿ 11.50ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯಲ್ಲಿ ಲೋಪದೋಷಗಳು ಕಂಡುಬಂದರೆ ತಿದ್ದುಪಡಿ ಮಾಡುವುದಕ್ಕೆ ಫೆ.3ರಿಂದ 5ರ ವರೆಗೆ ಕಾಲಾವಕಾಶವನ್ನೂ ನೀಡಲಾಗಿದೆ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ಬಸವರಾಜ ಪಿ.ಡೋಣೂರ ತಿಳಿಸಿದರು.
ಸಂಪೂರ್ಣ ಪ್ರವೇಶ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿರುವ ಕಾರಣ ವಿದ್ಯಾರ್ಥಿಗಳು ಅರ್ಜಿಯಲ್ಲಿ ತಮ್ಮ ಇ-ಮೇಲ್ ಮತ್ತು ದೂರವಾಣಿ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು ಎಂದು ತಿಳಿಸಿದರು.
ಪ್ರವೇಶ ಪರೀಕ್ಷೆಯನ್ನು ಭಾರತ ಮತ್ತು 27 ಹೊರದೇಶಗಳು ಸೇರಿದಂತೆ 312 ನಗರಗಳಲ್ಲಿ ನಡೆಸಲಾಗುತ್ತದೆ. ರಾಜ್ಯದಲ್ಲಿ ಮೈಸೂರು, ಕಲಬುರಗಿ, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಹಾಸನ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು
ದೇಶ ವಿದೇಶಗಳ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳು ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುತ್ತಿದ್ದು, ಸುಮಾರು 2 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 200 ಬೋಧಕರು ಇದ್ದಾರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಅಗತ್ಯ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗಿದೆ ಎಂದರು.