ಕರ್ತವ್ಯದಲ್ಲಿ ಪ್ರಾಮಾಣಿಕತೆ, ಶ್ರದ್ಧೆ ಮುಖ್ಯ

Sarkari Noukararu
Published on

ಚಿತ್ರದುರ್ಗ: ಪ್ರಾಮಾಣಿಕ ಕರ್ತವ್ಯದೊಂದಿಗೆ ನ್ಯಾಯ ಕೊಡಿಸುವ ಮೂಲಕ ಹೆಚ್ಚೆಚ್ಚು ಜನಸೇವೆಯಲ್ಲಿ ತೊಡಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ 2024-29ನೇ ಸಾಲಿನ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜನಪ್ರತಿನಿಧಿಗಳು 5 ವರ್ಷ ಅಧಿಕಾರ ಪೂರ್ಣಗೊಂಡ ಬಳಿಕ ಮತ್ತೆ ಜನರ ಬಳಿಗೆ ಹೋಗುತ್ತೇವೆ. ಆದರೆ, ಸರ್ಕಾರಿ ನೌಕರರಿಗೆ ಸಾರ್ವಜನಿಕರ ಸೇವೆ ಮಾಡಲು 35 ವರ್ಷಗಳ ಸುದೀರ್ಘ ಅವಕಾಶ ಲಭಿಸಿದೆ. ಹೀಗಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಿ ಎಂದರು.

ಅಭಿವೃದ್ಧಿ ಪರ ಕಾರ್ಯನಿರ್ವಹಿಸುವ ಹೊಣೆಗಾರಿಕೆ ಎಲ್ಲ ಪಕ್ಷಗಳ ಮೇಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರಿ ನೌಕರರ ಪರವಾಗಿದ್ದಾರೆ. ಆದ್ದರಿಂದ ಜನಸೇವೆಯೇ ಜನಾರ್ದನನ ಸೇವೆಯೆಂದು ಭಾವಿಸಿ ಶ್ರಮಿಸೋಣ ಎಂದು ಕಿವಿಮಾತು ಹೇಳಿದರು.

ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಸರ್ಕಾರ ನೌಕರರ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ. ಗ್ರೂಪ್ ‘ಡಿ’ಯಿಂದ ‘ಎ’ವರೆಗೆ ಉತ್ತಮ ವೇತನ ಸಿಗುತ್ತಿದೆ. ಹೀಗಾಗಿ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಒಟ್ಟು ಜನಸಂಖ್ಯೆಯ ಶೇ. 1ರಷ್ಟು ಮಾತ್ರ ನೌಕರರಿದ್ದೇವೆ. ಸರ್ಕಾರದ ಸೌಲಭ್ಯ ಬಳಸಿಕೊಂಡು ಬೌದ್ಧಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡಿ. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಒತ್ತಡವಿದ್ದು, ಅದನ್ನು ನಿರ್ವಹಿಸಿಕೊಂಡು ಕಾರ್ಯಪ್ರವೃತ್ತರಾಗಿ. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ. ಸರ್ಕಾರದ ಆಶೋತ್ತರಗಳಿಗೆ ತಕ್ಕಂತೆ ಎಲ್ಲರೂ ಕೆಲಸ ಮಾಡೋಣ ಎಂದು ತಿಳಿಸಿದರು.

ಜಿಲ್ಲಾ ಶಾಖೆ ನೂತನ ಅಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಪದಾಧಿಕಾರಿಗಳಾದ ಆರ್.ಶ್ರೀನಿವಾಸ್, ಎ.ಮಲ್ಲಿಕಾರ್ಜುನ್, ಎಸ್.ರಾಜಪ್ಪ, ಸಿ.ಟಿ.ವೀರೇಶ್, ಟಿ.ಜಗದೀಶ್, ಆರ್.ರಮೇಶ್, ಆರ್.ಶಾಂತಕುಮಾರ್, ತಿಪ್ಪೇಶಪ್ಪ ಸೇರಿ ಜಿಲ್ಲೆಯ ಎಲ್ಲ ನಿರ್ದೇಶಕರು, ತಾಲೂಕುಗಳ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಶಾಖೆಯ ನಿಕಟಪೂರ್ವ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ, ತಹಸೀಲ್ದಾರ್ ಡಾ.ನಾಗವೇಣಿ, ತಾಪಂ ಇಒ ವೈ.ರವಿಕುಮಾರ್, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಡಿಡಿಪಿಐ ಎಂ.ಆರ್.ಮಂಜುನಾಥ್, ಮುಖಂಡ ರಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net