ಕರ್ತವ್ಯಗಳ ಪಾಲನೆಯಿಂದ ದೇಶಾಭಿವೃದ್ಧಿ -ಶಾಸಕ ಬಸವಂತಪ್ಪ -ಮಾಯಕೊಂಡದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ

IMG-20230915-WA0028.jpg
Published on

ದಾವಣಗೆರೆ: ಸಂವಿಧಾನದಲ್ಲಿ ಹೇಳಲಾದ ಮೂಲ ಕರ್ತವ್ಯಗಳ ಪಾಲನೆ ಜತೆಗೆ ಕಾನೂನುಗಳನ್ನು ಗೌರವಿಸಬೇಕು. ಸಮಾಜಮುಖಿ ಕಾರ್ಯದಲ್ಲಿ ತೊಡಗಿದಲ್ಲಿ ದೇಶ ಅಭಿವೃದ್ಧಿ ಕಾಣಬಹುದು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಮಾಯಕೊಂಡದಲ್ಲಿ ಗ್ರಾಮ ಪಂಚಾಯಿತಿ, ಕರ್ನಾಟಕ ಪಬ್ಲಿಕ್ ಶಾಲೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಹಾಗೂ ಇತರ ಮಹಾಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಂವಿಧಾನದಡಿ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ, ಶೈಕ್ಷಣಿಕ, ಧಾರ್ಮಿಕ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ. ಸಂವಿಧಾನ ಎಲ್ಲ ಧರ್ಮಗ್ರಂಥಗಳಿಗಿಂತ ಮಿಗಿಲಾದುದು. ಇದರ ಶ್ರೇಷ್ಠತೆಯ ಭದ್ರಬುನಾದಿ ಕಾರಣಕ್ಕೆ, ಭಾರತ ಶಾಂತಿಯಿಂದ ಮುನ್ನಡೆಯುತ್ತಿದೆ ಎಂದು ಹೇಳಿದರು.

ಗ್ರಾಮಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕೆಂದು ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಸವರಾಜಪ್ಪ, ಉಪ ತಹಸೀಲ್ದಾರ್ ಹಾಲೇಶಪ್ಪ, ಕೆಪಿಎಸ್ ಶಾಲೆ ಪ್ರಾಚಾರ್ಯ ಬಸವರಾಜಪ್ಪ, ಉಪ ಪ್ರಾಚಾರ್ಯ ಟಿ. ನಾಗರಾಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಜಿ.ಬಿ. ಮಲ್ಲೇಶ್, ಹನುಮಂತಪ್ಪ, ಸಿಆರ್‌ಪಿ ಗಾಯತ್ರಿ, ಪಿಡಿಒ ನಾಗರಾಜ, ಶಿಕ್ಷಕಿ ಗಂಗಮ್ಮ, ಕನ್ನಡಯುವ ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net