

ನೆಲಮಂಗಲ: ನಿಗದಿತ ಸಮಯಕ್ಕೆ ಬರದೆ ತಾಲೂಕು ಕಚೇರಿಗೆ ತಡವಾಗಿ ಬಂದ ಅಧಿಕಾರಿ, ಸಿಬ್ಬಂದಿಯನ್ನು ತಹಸೀಲ್ದಾರ್ ಕೆ. ಮಂಜುನಾಥ್ ತರಾಟೆಗೆ ತಗೆದುಕೊಂಡರು. ಹಾಜರಿ ಪುಸ್ತಕದಲ್ಲಿ ಅವರೆಲ್ಲರ ಹೆಸರಿಗೆ ಅರ್ಧ ದಿನ ರಜೆ ಬರೆದರು.
ಮಂಗಳವಾರ ಬೆಳಗ್ಗೆ ನಿಗದಿತ ಸಮಯಕ್ಕೆ ತಹಸೀಲ್ದಾರ್ ಕೆ. ಮಂಜುನಾಥ್ ಕರ್ತವ್ಯಕ್ಕೆ ಹಾಜರಾಗಿದ್ದರು. ತಾಲೂಕಿನಾದ್ಯಂತ ವಿವಿಧ ಕೆಲಸ ಕಾರ್ಯಗಳಿಗಾಗಿ ಬಂದಿದ್ದ ಸಾರ್ವಜನಿಕರು ಕೆಲ ಅಧಿಕಾರಿಗಳನ್ನು ಭೇಟಿ ಆಗಬೇಕು. ಆದರೆ, ಕಚೇರಿಯ ವಿವಿಧ ಶಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ 11 ಗಂಟೆಯಾದರೂ ಕಚೇರಿಗೆ ಬಂದಿಲ್ಲ ಎಂದು ತಹಸೀಲ್ದಾರ್ ಎದುರು ಅಳಲು ತೋಡಿಕೊಂಡರು.
ಅರ್ಧದಿನ ರಜೆ: ತಕ್ಷಣವೇ ತಾಲೂಕು ಕಚೇರಿ ಇತರೆ ವಿಭಾಗಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ. ಮಂಜುನಾಥ್, ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು. ಕಚೇರಿ ಸಮಯಕ್ಕೆ ಬಾರದ ವಿವಿಧ ಶಾಖೆಗಳ ಮುಖ್ಯಸ್ಥರು, ಅಧಿಕಾರಿ ಮತ್ತು ಸಿಬ್ಬಂದಿ ಹೆಸರಿನ ಮುಂದೆ ಅರ್ಧ ದಿನ ರಜೆ ಬರೆದರು.
ಬಯೋಮೆಟ್ರಿಕ್ ಸ್ಥಗಿತ: ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಬಯೊಮೆಟ್ರಿಕ್ ಹಾಜರಾತಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮನಸ್ಸಿಗೆ ತೋಚಿದ ಸಮಯಕ್ಕೆ ಕಚೇರಿಗೆ ಬರಲಾರಂಭಿಸಿದ್ದಾರೆ. ಇದನ್ನು ಗಮನಿಸಿದ ತಹಸೀಲ್ದಾರ್ ಅವರು, ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಕಚೇರಿ ಸಮಯದಲ್ಲಿ ಸಾರ್ವಜನಿಕರಿಗೆ ಲಭ್ಯ ಇರಬೇಕು ಎಂದು ಸೂಚಿಸಿ ಎಲ್ಲ ಅಧಿಕಾರಿ, ಸಿಬ್ಬಂದಿಗೆ ನೋಟೀಸ್ ಜಾರಿ ಮಾಡಲು ನಿರ್ಧರಿಸಿದ್ದಾರೆ.