

ಪಿರಿಯಾಪಟ್ಟಣ: ಸಾಮಾಜಿಕ ವ್ಯವಸ್ಥೆಯಡಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನಮ್ಮ ಕರ್ತವ್ಯ ಲೋಪವಾಗದಂತೆ ನಡೆದುಕೊಂಡಾಗ ಮಾತ್ರ ಮಾನವ ಹಕ್ಕುಗಳು ದುರುಪಯೋಗವಾಗುವುದಿಲ್ಲ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ದೇವರಾಜ ಭೂತೆ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಮತ್ತು ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಮತ್ತು ಇತರ ಸಹಯೋಗದಲ್ಲಿ ಮಂಗಳವಾರ ನಡೆದ ವಿಶ್ವಮಾನವ ಹಕ್ಕುಗಳ ಸಂಭ್ರಮಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಕ್ತಿಯ ಹಕ್ಕನ್ನು ನಾವು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ನಾವು ಯಾವುದೇ ಬೇಕು, ಬೇಡಗಳನ್ನು ಕೆಲವೊಂದು ಸಾರಿ ಕೇಳಿಯೇ ಪಡೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಹೋರಾಟ ಮಾಡಿಯೇ ಪಡೆಯಬೇಕಾಗುತ್ತದೆ. ಯಾವುದೂ ತಾನಾಗಿಯೇ ಸಿಗುವುದಿಲ್ಲ ಎಂದರು.
ಪಟ್ಟಣದ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎ.ಸಮೀವುಲ್ಲಾ ಮಾತನಾಡಿ, ಈ ಹಿಂದೆ ಬಸವಣ್ಣ, ಬುದ್ಧ ಸೇರಿದಂತೆ ಹಲವು ಮಹನೀಯರು ತಮ್ಮ ಸರಳ ಸಜ್ಜನಿಕೆಯ ಜೀವನದಿಂದ ಇನ್ನೊಬ್ಬರ ಮೂಲ ಹಕ್ಕಿಗೆ ಧಕ್ಕೆಯಾಗದಂತೆ ನೋಡಿಕೊಂಡರು. ಅಂತಹವರ ಆದರ್ಶ ತತ್ವ ಸಿದ್ಧಾಂತಗಳನ್ನು ನಾವು ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿಯ ಮೂಲ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ಭ್ರಷ್ಟಾಚಾರದಂತಹ ಕೆಲಸ ಮಾಡಲು ಮನಸ್ಸು ಮಾಡುವುದಿಲ್ಲ ಎಂದರು.
ಈ ವೇಳೆ ತಹಸೀಲ್ದಾರ್ ಕೆ.ಚಂದ್ರಮೌಳಿ, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್‌ಗೌಡ, ವಕೀಲ ಸಂಘದ ಅಧ್ಯಕ್ಷ ಬಿ.ಜಿ. ಸತೀಶ್, ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಜಿ.ಹೇಮಾವತಿ, ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್, ಪಿಡಬ್ಲ್ಯುಡಿ ಇಲಾಖೆ ಎಇಇ ಎಂ.ಆರ್. ವೆಂಕಟೇಶ್ ಮಾತನಾಡಿದರು.
ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ರಾಜ್ಯ ಉಪಾಧ್ಯಕ್ಷೆ ಬಿ.ಭಾಗ್ಯ, ತಾಲೂಕು ಅಧ್ಯಕ್ಷ ಎಸ್.ಡಿ.ರಮೇಶ್, ಗೌರವಾಧ್ಯಕ್ಷ ಟಿ.ಎನ್.ರಾಮೇಗೌಡ, ಉಪಾಧ್ಯಕ್ಷ ಅರುಣ್‌ಕುಮಾರ್, ಕಾರ್ಯದರ್ಶಿ ಜಿ.ಮಹದೇವ್, ಜಂಟಿ ಕಾರ್ಯದರ್ಶಿ ಪುರುಷೋತ್ತಮ, ಖಜಾಂಚಿ ಮಾದೇಶ್ ಹಾಗೂ ವಿವಿಧ ಘಟಕದ ಪದಾಧಿಕಾರಿಗಳು, ಸಬ್‌ಇನ್‌ಸ್ಪೆಕ್ಟರ್ ಸುರೇಶ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸತೀಶ್, ಅಬಕಾರಿ ಇಲಾಖೆ ಸಬ್‌ಇನ್‌ಸ್ಪೆಕ್ಟರ್ ರಘು ಇತರರಿದ್ದರು.