

ಹಾಸನ:ಹೊಳೆನರಸೀಪುರದಲ್ಲಿ ತಹಸೀಲ್ದಾರ್ ಮತ್ತು ಡಿವೈಎಸ್ಪಿ ಅವರು ಪಕ್ಷಪಾತ ನೀತಿ ಅನುಸರಿಸುತ್ತಿದ್ದು ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಒತ್ತಾಯ ಮಾಡಿದ ಅವರು, ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಒಂದು ಕುಟುಂಬಕ್ಕೆ ಸೀಮಿತವಾಗಿ ಜಾತ್ರಾ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇದನ್ನ ಪ್ರಶ್ನಿಸಲು ಹೋದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು.
ಮುಜರಾಯಿ ಇಲಾಖೆ ಅಧಿಕಾರಿಗಳು ಜಾತ್ರೆಯ ಆಹ್ವಾನ ಪತ್ರಿಕೆಯನ್ನು ಒಂದು ಕುಟುಂಬದ ಹೆಸರಲ್ಲಿ ಮಾಡಿಸಿದ್ದಾರೆ. ಅಲ್ಲದೆ ಅಲ್ಲದೆ ಪ್ರಸಾದ ವಿನಿಯೋಗದ ಅವಕಾಶವನ್ನು ಆ ಕುಟುಂಬಕ್ಕೆ ಮಾತ್ರ ನೀಡಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಹೆಸರು ಪ್ರಸ್ತಾಪಿಸದೆ ಆರೋಪ ಮಾಡಿದರು.
ಪ್ರಸಾದ ಹಂಚಿಕೆಗೆ ತಮಗೂ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪೊಲೀಸರು ಮತ್ತು ಅಲ್ಲಿನ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ತಹಸೀಲ್ದಾರ್ ವಿಶ್ವನಾಥ್ ಮತ್ತು ಡಿವೈಎಸ್ಪಿ ಮುರಳೀಧರ್ ಅವರ ಪಕ್ಷಪಾತ ಧೋರಣೆಯೇ ಕಾರಣ. ಆದ್ದರಿಂದ ಅವರಿಬ್ಬರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈ.ಎಚ್. ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ದಿನೇಶ್, ಹಾಸನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಯೂಂ ಮತ್ತಿತರರು ಉಪಸ್ಥಿತರಿದ್ದರು.