

ಬಾಗಲಕೋಟೆ: ಕರ್ತವ್ಯ ನಿಷ್ಠೆ, ಶಿಸ್ತು, ಮತ್ತು ಶ್ರದ್ದೆ ಹಾಗೂ ದೃಢ ನಿರ್ಧಾರ – ಈ ನಾಲ್ಕು ಮೌಲ್ಯಗಳನ್ನು ತಮ್ಮ ಕರ್ತವ್ಯದ ಅಂಗವಾಗಿ ಅಳವಡಿಸಿಕೊಂಡರೆ ಕಾರ್ಯಗಳು ಸುಗಮಗೊಳ್ಳುತ್ತವೆ ಎಂದು ನಿವೃತ್ತ ಎ.ಎಸ್.ಐ. ಡಿಸಿ ಗುಡ್ಡಳ್ಳಿ ಹೇಳಿದರು.
ಬುಧವಾರ ನವನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಆಯೋಜಿಸಲಾದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಒಂದು ವಿಶ್ವವಿದ್ಯಾಲವಿ ದ್ದಂತೆ , ಈ ಸಂಸ್ಥೆಯಲ್ಲಿಯೂ ಅನೇಕ ವಿಭಾಗಗಳು ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ ವಿಭಾಗಗಳು ಪೊಲೀಸ್ ಇಲಾಖೆಯ ಕಾರ್ಯಗಳಲ್ಲಿ ಸಹಾಯ ಮಾಡುತ್ತವೆ ಎಂದರು.
ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು, ರಕ್ಷಣೆ ಒದಗಿಸುವುದು ಹಾಗೂ ಯಾವುದೇ ಘಟನೆಯ ಸತ್ಯಾಸತ್ಯತೆಯನ್ನು ಪತ್ತೆ ಮಾಡುವುದು ಪೊಲೀಸರ ಮುಖ್ಯ ಕರ್ತವ್ಯಗಳಾಗಿವೆ” ಎಂದು ಹೇಳಿದರು.
ಜಿಲ್ಲೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ ಅಧಿಕಾರಿಗಳು ನಿರಂತರವಾಗಿ ಶ್ರಮಿಸಿ ಶಿಷ್ಟಾಚಾರವನ್ನು ಕಾಪಾಡಬೇಕು. ಜೊತೆಗೆ, ಬಾಗಲಕೋಟೆ ಜಿಲ್ಲೆಗೆ ಹೊರಗಿನಿಂದ ಬಂದ ಅಧಿಕಾರಿಗಳಿಗೆ ಸೂಕ್ತ ವಾಸ್ತವಿಕ ವ್ಯವಸ್ಥೆ ಮಾಡಬೇಕು. ನಿವೃತ್ತ ಪೊಲೀಸರಿಗಾಗಿ ಸಭಾಭವನ ನಿರ್ಮಾಣ, ಅವರ ವೈದ್ಯಕೀಯ ವೆಚ್ಚವನ್ನು ರೂ.2 ಲಕ್ಷದಿಂದ ಹೆಚ್ಚಿಸುವುದು, *ಅವರ ಕುಟುಂಬಗಳಿಗೆ ಶೈಕ್ಷಣಿಕ ಸಹಾಯ ಒದಗಿಸುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ 2024-25 ನೇ ಸಾಲಿನ ವರದಿ ವಾಚಿಸಿ ಮಾತನಾಡಿದ ಅವರು "ಪೋಲೀಸ್ ಇಲಾಖೆಯ ವೈದ್ಯಕೀಯ ಸಹಾಯ, ಶಿಕ್ಷಣ, ಕರ್ತವ್ಯದಲ್ಲಿ ಮರಣ ಹೊಂದಿದ ಕುಟುಂಬಗಳಿಗೆ ಆರ್ಥಿಕ ನೆರವು, ಪೊಲೀಸ್ ಸಮುದಾಯ ಭವನ ನಿರ್ಮಾಣ ಹಾಗೂ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಖಾಲಿ ಇರುವ ಪೊಲೀಸ್ ಇಲಾಖೆಯ ಪ್ರದೇಶದಲ್ಲಿ 20,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ದಟ್ಟ ಅರಣ್ಯವನ್ನಾಗಿ ಮಾಡಲಾಗಿದೆ" ಎಂದು ವಿವರಿಸಿದರು.
ಇದೇ ವೇಳೆ 17 ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಪರೇಡ್ ಕಮಾಂಡರ್ ಸದಾಶಿವ್ ವನಜಂಕರ ಅವರ ನೇತೃತ್ವದಲ್ಲಿ ಆರು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ ಒಂದು ಮಹಿಳಾ ತಂಡವೂ ಸೇರಿತ್ತು. ವಿಶೇಷವೆಂದರೆ, ಪಥಸಂಚಲನದ ಎಲ್ಲಾ ಕಮಾಂಡ್‌ಗಳು ಕನ್ನಡದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ಬಸವಂತರಾಯ ದೇಸಾಯಿ ಸೇರಿ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.