ಕರ್ತವ್ಯ ನಿರತರಿಗೆ ಸೌಲಭ್ಯ ಒದಗಿಸಿ

30 Dwd 2
Published on

ಧಾರವಾಡ: ಕರೊನಾ ವೈರಸ್ ತಡೆಯಲು ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದೆ. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ವಿುಕರು, ಪೊಲೀಸ್, ಆರೋಗ್ಯ ಇಲಾಖೆ ಸೇರಿ ವಿವಿಧ ಅಗತ್ಯ ಸೇವೆಯಲ್ಲಿರುವ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅವಶ್ಯ ಸ್ಯಾನಿಟೈಸರ್, ಮಾಸ್ಕ್ ಗಳನ್ನು ಒದಗಿಸಬೇಕು. ಕರ್ತವ್ಯನಿರತ ಪೊಲೀಸರಿಗೆ ಸಕಾಲಕ್ಕೆ ಊಟ, ಉಪಾಹಾರ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಕರೊನಾ ನಿಯಂತ್ರಣ ಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರೊನಾ ನಿಯಂತ್ರಣಕ್ಕೆ ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ವಿುಕರಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳು ಹಾಗೂ ಊಟೋಪಚಾರದ ವ್ಯವಸ್ಥೆಯಾಗಬೇಕು. ವೃದ್ಧಾಪ್ಯ, ವಿಧವಾ, ಅಂಗವಿಕಲ, ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ಮುಂಚಿತವಾಗಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.

ಅವಳಿನಗರದಲ್ಲಿ ಸದ್ಯ 933 ತರಕಾರಿ ಮಾರಾಟಗಾರರಿಗೆ ವಲಯವಾರು ಪಾಸ್ ನೀಡಲಾಗಿದೆ. ಎಲ್ಲರೂ ಕಾರ್ಯಪ್ರವೃತ್ತರಾಗಿರುವುದರಿಂದ ಸಾರ್ವಜನಿಕರು ಮಾರುಕಟ್ಟೆಗೆ ಬರುವ ಪ್ರಮಾಣ ಗಣನೀಯವಾಗಿ ಇಳಿದಿದೆ. ಮನೆಮನೆಗೆ ತೆರಳಿ ಕಿರಾಣಿ ಪೂರೈಸಲು 245 ಜನರಿಗೆ ಅನುಮತಿ ನೀಡಲಾಗಿದೆ. ಇವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಸಚಿವ ಶೆಟ್ಟರ್, ಆನ್​ಲೈನ್​ನಲ್ಲಿ ಬೇಡಿಕೆ ಸ್ವೀಕರಿಸಿ ವಿವಿಧ ರೆಸ್ಟೋರೆಂಟ್​ಗಳಿಂದ ಪಾರ್ಸೆಲ್ ಸೇವೆ ನೀಡುವ ಖಾಸಗಿ ಏಜೆನ್ಸಿಗಳಿಗೆ ಅನುಮತಿ ನೀಡಿ ಪ್ರೋತ್ಸಾಹಿಸಬೇಕು ಎಂದು ಸೂಚಿಸಿದರು.

ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕಿಮ್್ಸ ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸಿಂಗ್ ಹಾಗೂ ಸಹಾಯಕ ಸಿಬ್ಬಂದಿಗೆ ಸದ್ಯ 600 ಪರ್ಸ್​ನಲ್ ಪೊ›ಟೆಕ್ಷನ್ ಗೇರ್​ಗಳಿವೆ. ಎನ್ 95 ಮಾಸ್ಕ್​ಗಳು 4,100ರಷ್ಟಿವೆ. ಹೆಚ್ಚಿನ ಸಾಮಗ್ರಿಗಳಿಗೆ ಬೇಡಿಕೆ ಸಲ್ಲಿಸಲಾಗುವುದು. ಕರೊನಾ ಪ್ರಯೋಗಾಲಯ ಸ್ಥಾಪನೆಗೆ ಹೆಚ್ಚುವರಿ ಕಿಟ್ ಹಾಗೂ ಅಗತ್ಯ ಉಪಕರಣಗಳನ್ನು ತರಿಸಲಾಗಿದೆ ಎಂದರು.

ಕಿಮ್ಸ್​ನಲ್ಲಿ ಕರೊನಾ ಗಂಟಲು ದ್ರವದ ಮಾದರಿ ಪರೀಕ್ಷೆಯ ಪ್ರಯೋಗಾಲಯ ಸ್ಥಾಪನೆ ಕಾರ್ಯ ಶೀಘ್ರ ಅನುಷ್ಠಾನಗೊಳ್ಳಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಕರೊನಾ ಶಂಕಿತ ವ್ಯಕ್ತಿಗಳನ್ನು ಅವರ ಮನೆಗಳಲ್ಲಿ ಕ್ವಾರಂಟೈನ್ ಮಾಡುವುದಕ್ಕಿಂತ ಸರ್ಕಾರಿ ಕ್ವಾರಂಟೈನ್ ಮಾಡಲು ಕಟ್ಟಡಗಳನ್ನು ಗುರುತಿಸಲಾಗಿದೆ. ಲಾಕ್​ಡೌನ್ ಅವಧಿಯಲ್ಲಿ ಎಲ್ಲ ಸರಕು ಸೇವೆಗಳ ಪೂರೈಕೆ ಮಾಡುವ ಲಾರಿಗಳ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ನಿರಾಶ್ರಿತ ಕೂಲಿಕಾರರಿಗೆ ಆಹಾರ ಪೊಟ್ಟಣಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪೊಲೀಸ್ ಆಯುಕ್ತ ಆರ್. ದಿಲೀಪ್, ಎಸ್​ಪಿ ವರ್ತಿಕಾ ಕಟಿಯಾರ್, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹಮ್ಮದ ಜುಬೇರ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಡಿಎಚ್​ಒ ಡಾ. ಯಶವಂತ ಮದಿನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಪುರುಷೋತ್ತಮ, ತಹಸೀಲ್ದಾರರಾದ ಶಶಿಧರ ಮಾಡ್ಯಾಳ, ಸಂತೋಷ ಬಿರಾದಾರ, ಪ್ರಕಾಶ ನಾಶಿ, ಅಮರೇಶ ಪಮ್ಮಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net