ಕರೋನಾ ತಡೆಗೆ 6 ವೈದ್ಯಕೀಯ ತಂಡ

0403Klb20
Published on


ಕಲಬುರಗಿ: ಕರೊನಾ ಸೋಂಕು ದೇಶದಲ್ಲೂ ವರದಿ ಆಗಿರುವುದರಿಂದ ಜಿಲ್ಲೆಯಲ್ಲಿ ಹರಡದಂತೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ದಿನವಿಡೀ ನಿಗಾ ಇಡಲು ಆರು ವೈದ್ಯಕೀಯ ತಂಡ ರಚಿಸಲಾಗಿದ್ದು, ಕಂಟ್ರೋಲ್ ರೂಂ ಸಹ ಆರಂಭಿಸಲಾಗುವುದು. ಜನರು ಅನಗತ್ಯವಾಗಿ ಅತಂಕಕ್ಕೆ ಒಳಗಾಗಬೇಡಿ. ಬದಲಿಗೆ ಜಾಗೃತೆ ವಹಿಸಿ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೆಕ್ಷಣಾ ಘಟಕದ ಕೋವಿಡ್-19 (ನೋವೆಲ್ ಕರೊನಾ ವೈರಸ್) ಕುರಿತು ಬುಧವಾರ ಜಿಲ್ಲಾ ಸಮನ್ವಯ ಸಮಿತಿ ತುರ್ತು ಸಭೆ ನಡೆಸಿದ ಅವರು, ಜಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್​ ರಚಿಸಲಾಗಿದೆ. ಅದರಂತೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಎರಡು ಹಾಸಿಗೆಗಳ ವಿಶೇಷ ವಾರ್ಡ ರಚಿಸುವಂತೆ ಸೂಚಿಸಿದರು. ಅಲ್ಲದೆ ಧರ್ಮಗುರುಗಳು, ಮಠಾಧೀಶರನ್ನು ಭೇಟಿ ಮಾಡಿ ಜನರಲ್ಲಿ ಅರಿವು ಮೂಡಿಸುವಂತೆ ಕೋರಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಕೈ ಸ್ವಚ್ಛ ತೊಳೆಸುವಂತೆ ಸುತ್ತೋಲೆ ಹೊರಡಿಸಲಾಗುವುದು. ಇದಕ್ಕೆ ಶಿಕ್ಷಕರು ಉಸ್ತುವಾರಿ ನೋಡಿಕೊಳ್ಳಬೇಕು. ಮಾಸ್ಕ್ ಧರಿಸಲು ಸಹ ಮಕ್ಕಳಿಗೆ ಸಲಹೆ ನೀಡಬೇಕು. ಕಚೇರಿ ಹಾಗೂ ಸಾರ್ವಜನಿಕ ಸಾರಿಗೆಗಳನ್ನು ಆಗಾಗ್ಗೆ ಡೆಟಾಲ್ ಮೊದಲಾದವುಗಳಿಂದ ತೊಳೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಅನಗತ್ಯವಾಗಿ ಹೆಚ್ಚಿನ ಜನರು ಸೇರಬೇಡಿ. ಸಭೆ, ಸಮಾರಂಭ ನಡೆಸಬೇಕಾದರೂ ತುಂಬ ಎಚ್ಚರಿಕೆ ವಹಿಸಬೇಕು. ಇದುವರೆಗೆ ನಮ್ಮಲ್ಲಿ ಪ್ರಕರಣ ಪತ್ತೆ ಆಗದ್ದರಿಂದ ವಾರದ ಸಂತೆ ಮೊದಲಾದವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿಲ್ಲ ಎಂದು ಶರತ್ ಹೇಳಿದರು.
ಕರೊನಾ ಕುರಿತು ಜಿಮ್ಸ್ ವೈದ್ಯ ಡಾ.ಗುರುರಾಜ ಸಮಗ್ರ ಮಾಹಿತಿ ನೀಡಿದರು. ಸಂಶೋಧನಾ ವಿಜ್ಞಾನಿ ಡಾ.ಮುಲ್ತಾಜಿಸ್ ಪಠಾಣ್ ಅವರು ಕೊರೋನಾ ವೈರಸ್ ದೇಹ ಪ್ರವೇಶಿಸುವ ವಿಧಾನ ತಿಳಿಸಿದರು.
ಜಿಪಂ ಸಿಇಒ ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವಾನಂದ ಸುರಗಾಳಿ, ಜಿಲ್ಲಾ ಶಸ್ತ್ರಜ್ಞ ಡಾ.ಅಂಬಾರಾಯ ರುದ್ರವಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ. ಜಬ್ಬಾರ್, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್, ಇಎಸ್ಐಸಿ ಆಸ್ಪತ್ರೆ ಡೀನ್ ಡಾ.ದೀನಾನಾಥ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ ಸಂಗಾ ಇತರರಿದ್ದರು.
ಭಾರತದಲ್ಲಿ ಕರೊನಾಕ್ಕೆ ಯಾರೂ ಬಲಿಯಾಗಿಲ್ಲ
ಚೀನಾದಲ್ಲಿ ಡಿ.31ರಂದು ಕರೊನಾ ವೈರಸ್ ಪತ್ತೆಯಾದ ಬಳಿಕ ವಿಶ್ವದ 76 ದೇಶಗಳಲ್ಲಿ ಹರಡಿದೆ. 90 ಸಾವಿರ ಜನರು ಸೋಂಕಿನಿಂದ ಬಳಲಿದ್ದಾರೆ. ಭಾರತದಲ್ಲಿ ಇತ್ತೀಚೆಗಷ್ಟೇ ಸೋಂಕು ಪತ್ತೆಯಾಗಿದ್ದು, ಯಾರೊಬ್ಬರೂ ವೈರಸ್ಗೆ ಬಲಿಯಾಗಿಲ್ಲ ಎಂದು ಜಿಮ್ಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಗುರುರಾಜ ಸಭೆಯಲ್ಲಿ ಪಿಪಿಟಿ ಮೂಲಕ ಮಾಹಿತಿ ನೀಡಿದರು. ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುವುದನ್ನು ಬಿಡಬೇಕು. ಮಾಸ್ಕ್, ಕರವಸ್ತ್ರ, ಗ್ಲೌಸ್ ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಕರೊನಾ ಸೋಂಕಿತರಲ್ಲಿ 4ರಿಂದ 14 ದಿನದಲ್ಲಿ ಪತ್ತೆಯಾಗುತ್ತದೆ. ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ, ಕಿಡ್ನಿ ವೈಫಲ್ಯ, ನ್ಯುಮೋನಿಯಾ ಲಕ್ಷಣ ಕಾಣಿಸುತ್ತದೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲದ್ದರಿಂದ ಸಾರ್ವಜನಿಕರು ಇಂಥ ಲಕ್ಷಣ ಕಂಡಾಕ್ಷಣ ವೈದ್ಯರನ್ನು ಸಂಪಕರ್ಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಸಂಪೂರ್ಣ ಗುಣಮುಖರಾಗಲು 28 ದಿನ ಬೇಕಾಗುತ್ತದೆ ಎಂದರು. ಇದೊಂದು ಹೊಸ ವೈರಸ್ ಆಗಿದ್ದರಿಂದ ಔಷಧ ಕಂಡು ಹಿಡಿದಿಲ್ಲ. ಗೋಮೂತ್ರ ಮೊದಲಾದವು ಔಷಧಿ ಆಗಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ಜನರು ನಂಬಬೇಡಿ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net