

ಧಾರವಾಡ: ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಇಲ್ಲಿನ ದಾನೇಶ್ವರಿ ನಗರದ ಸ್ಮಶಾನದಲ್ಲಿ ನೆರವೇರಿಸಲು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆದಿದೆ.
ಕರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ವನ್ನು ದಾನೇಶ್ವರಿನಗರ ಬಳಿಯ ಸ್ಮಶಾನದಲ್ಲಿ ನಡೆಸಲಾಗುತ್ತಿತ್ತು. ಆದರೆ, ರಸ್ತೆ ಪಕ್ಕದಲ್ಲಿ ಅಂತ್ಯಸಂಸ್ಕಾರ ನಡೆಸುತ್ತಿರುವುದು ಹಾಗೂ ಪಿಪಿಇ ಕಿಟ್ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಭಾನುವಾರ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು, ‘ಇಲ್ಲಿ ಹೂಳಬೇಡಿ, ಸ್ಮಶಾನದ ಸುತ್ತ ನೂರಾರು ಮನೆಗಳಿವೆ, ಮಕ್ಕಳು, ವೃದ್ಧರು ಸೇರಿ ಎಲ್ಲರೂ ಓಡಾಡುತ್ತಾರೆ. ರಸ್ತೆಗೆ ಹೊಂದಿಕೊಂಡು ಅಂತ್ಯಸಂಸ್ಕಾರ ನಡೆಸಿದರೆ, ಬೇಕಾಬಿಟ್ಟಿಯಾಗಿ ಪಿಪಿಇ ಕಿಟ್ ಎಸೆದು ಹೋದರೆ ಎಲ್ಲರಿಗೂ ಸಮಸ್ಯೆ ಆಗಲಿದೆ. ಹೀಗಾಗಿ ಈ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸುವುದು ಬೇಡ’ ಎಂದು ನಿವಾಸಿಗಳು ಪಟ್ಟು ಹಿಡಿದಿದ್ದರು.
ಮಾಹಿತಿ ತಿಳಿದು ಕೂಡಲೆ ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳೀಯರ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ಅವರ ಮಾತಿಗೆ ಒಪ್ಪದ ಜನರು, ಈ ಸ್ಥಳದಲ್ಲಿ ಮಾತ್ರ ಬೇಡ ಎಂದು ಪಟ್ಟು ಹಿಡಿದರು.
ಕೊನೆಗೆ ವಲಯ ಕಚೇರಿ 12ರ ಸಹಾಯಕ ಆಯುಕ್ತ ಶರಣಬಸಪ್ಪ ಕೆಂಭಾವಿ ಅವರು ಸ್ಥಳೀಯ ಜನರೊಂದಿಗೆ ಮಾತನಾಡಿ, ‘ರಸ್ತೆಗೆ ಸಮೀಪದಲ್ಲಿ ಅಂತ್ಯಸಂಸ್ಕಾರ ನಡೆಸದೆ ಸ್ಮಶಾನದಲ್ಲೇ ಸರ್ಕಾರದ ನಿರ್ದೇಶನದಂತೆ ವೈಜ್ಞಾನಿಕ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸುತ್ತೇವೆ. ಈ ಕುರಿತು ಜನರಲ್ಲಿ ಸಂಶಯ ಬೇಡ. ಪಿಪಿಇ ಕಿಟ್ಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಈಗಲೇ ಸಿಬ್ಬಂದಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುತ್ತೇನೆ. ಜತೆಗೆ, ದಾನೇಶ್ವರಿನಗರ ಸೇರಿ ಸಂಪೂರ್ಣ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗುವುದು. ಈ ಹಿಂದೆ ನಡೆದ ಅಚಾತುರ್ಯಕ್ಕೆ ಕ್ಷಮೆ ಇರಲಿ’ ಎಂದು ಹೇಳಿದರು. ಬಳಿಕ ಜನರು ಅಂತ್ಯಸಂಸ್ಕಾರ ನಡೆಸಲು ಷರತ್ತುಬದ್ಧವಾಗಿ ಸಮ್ಮತಿ ನೀಡಿದರು.