

ತುಮಕೂರು ; ಕರೊನಾತಂಕದ ನಡುವೆಯೇ ತಾಲೂಕು ಪಂಚಾಯಿತಿ ಸರಣಿ ಸಭೆಗಳನ್ನು ಆಯೋಜಿಸಿರುವುದು ಹಲವು ಗುಮಾನಿಗಳನ್ನು ಹುಟ್ಟುಹಾಕಿದೆ. ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜನತಾಕರ್ಫ್ಯೂವನ್ನು ಜೂ.14ರವರೆಗೆ ವಿಸ್ತರಿಸಿದ್ದರೂ ತುಮಕೂರು ತಾಪಂನಲ್ಲಿ ಜೂ.8 ರಿಂದ 14ರವರೆಗೆ ಸರಣಿ ಸಭೆಗಳನ್ನು ನಿಗದಿ ಪಡಿಸಲಾಗಿದೆ.
ಈ ತಿಂಗಳಾಂತ್ಯಕ್ಕೆ ತಾಪಂ ಆಡಳಿತಾವಧಿ ಪೂರ್ಣಗೊಳ್ಳಲಿದ್ದು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ 15ನೇ ಹಣಕಾಸು ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲು ತರಾತುರಿಯಲ್ಲಿ ಆಡಳಿತರೂಢ ಬಿಜೆಪಿಯ ತಾಪಂ ಅಧ್ಯಕ್ಷೆ ಎನ್.ಇ.ಕವಿತಾ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಈ ಮೊದಲು ಜೂ.7ರವರೆಗೆ ಲಾಕ್‌ಡೌನ್ ಘೋಷಿಸಲಾಗಿತ್ತು. ಆದರೆ, ಕರೊನಾ ಆರ್ಭಟ ತಗ್ಗದ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರ ಲಾಕ್‌ಡೌನ್ ಮುಂದುವರೆಸಿದ್ದು, ಸರಣಿಸಭೆಗಳನ್ನು ಆಯೋಜಿಸಿರುವ ತಾಪಂ ಈಗ ಸಭೆ ನಡೆಸಬೇಕೆ, ಬೇಡವೇ ಎಂಬ ಸಂದಿಗ್ಧತೆಗೆ ಸಿಲುಕಿದೆ.
ಸ್ಥಾಯಿಸಮಿತಿ ಸಭೆ: ಸಾಮಾನ್ಯ ಸಭೆಗೂ ಮುನ್ನ ಸ್ಥಾಯಿಸಮಿತಿಗಳ ಸಭೆ ನಡೆಸಿ ಅಲ್ಲಿ ಒಪ್ಪಿಗೆ ಪಡೆಯಬೇಕಿರುವುದರಿಂದ ಜೂ.8ಕ್ಕೆ ಹಣಕಾಸು, ಲೆಕ್ಕಪರಿಶೋಧನೆ ಹಾಗೂ ಯೋಜನಾ ಸ್ಥಾಯಿಸಮಿತಿ ಸಭೆ ಬೆಳಗ್ಗೆ 10ಕ್ಕೆ ಕರೆಯಲಾಗಿದ್ದು 2021-22ನೇ ಸಾಲಿಗೆ ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಸಂಬಂಧ ಸ್ಥಾಯಿಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
ಅದೇ ದಿನ ಮಧ್ಯಾಹ್ನ 12ಕ್ಕೆ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ಸಹ ನಡೆಯಲಿದೆ. ಮರುದಿನ ಅಂದರೆ ಜೂ.9ರಂದು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಸಭೆ ಕರೆಯಲಾಗಿದೆ. ಈ ಸ್ಥಾಯಿಸಮಿತಿಗಳಲ್ಲಿ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳ ‘ಶಾಸ್ತ್ರ ’ ಮಾಡಲಾಗುವುದು.
14ರಂದು ಸಾಮಾನ್ಯ ಸಭೆ: ಹಣಕಾಸು ಸ್ಥಾಯಿಸಮಿತಿಯಲ್ಲಿ ಕೈಗೊಳ್ಳುವ ಈ ಸಾಲಿನ ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಾಗೂ 15ನೇ ಹಣಕಾಸು ಯೋಜನೆಯಡಿ ಬಂದಿರುವ ಮೊದಲ ಕಂತು 60 ಲಕ್ಷ ರೂ.,ಗಳಿಗೆ ಕ್ರಿಯಾಯೋಜನೆ ಅನುಮೋದನೆ ವಿಚಾರವನ್ನು 14ರಂದು ಸಾಮಾನ್ಯಸಭೆ ಮುಂದೆ ತಂದು ಸಭೆ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ಕರೊನಾ ನೆಪ ಮಾಡಿಕೊಂಡು ಯಾವುದೇ ರೀತಿಯ ಚರ್ಚೆಗೆ ಅವಕಾಶ ಮಾಡಿಕೊಡದೆ ತರಾತುರಿಯಲ್ಲಿ ಕೇಂದ್ರ ಸರ್ಕಾರದ ಅನುದಾನಕ್ಕೆ ಒಪ್ಪಿಗೆ ಪಡೆಯುತ್ತಿರುವುದು ಈಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಅನಿವಾರ್ಯ, ಅವಶ್ಯಕ ಸಂದರ್ಭದಲ್ಲಿ ಸಭೆಗಳನ್ನು ಆಯೋಜಿಸಲು ಅನುಮತಿ ಇದೆ. ಕರೊನಾ ಮಾರ್ಗಸೂಚಿಗಳನ್ವಯ ಸಭೆ ನಡೆಸಬೇಕಿದೆ. ತಾಪಂ ಆಡಳಿತಾವಧಿ ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದ್ದು ಹಾಗಾಗಿ ಸಭೆ ಕರೆದಿರಬಹುದು. ಈ ಬಗ್ಗೆ ಮಾಹಿತಿ ಪಡೆಯಲಾಗುವುದು.
ಕೆ.ವಿದ್ಯಾಕುಮಾರಿ ಸಿಇಒ, ಜಿಪಂ
ಕರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ಸಾಮಾನ್ಯಸಭೆ ಕರೆಯಲು ಸರ್ಕಾರದ ಅನುಮತಿ ಇದೆ. ಜೂ.14ರಂದು ಬೆಳಗ್ಗೆ ಲಾಕ್‌ಡೌನ್ ಅಂತ್ಯಗೊಳ್ಳಲಿದ್ದು ಅಂದು ಸಾಮಾನ್ಯಸಭೆ ಇರಲಿದೆ. ಆ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳು ಎನಿರಲಿದೆಯೋ ಅದನ್ನು ಅನುಸರಿಸಲಾಗುವುದು. 15ನೇ ಹಣಕಾಸು ಯೋಜನೆ ಅನುದಾನಕ್ಕೆ ಅನುಮೋದನೆ ಪಡೆಯಬೇಕಿರುವುದರಿಂದ ಈ ತಿಂಗಳಲ್ಲೇ ಸಾಮಾನ್ಯಸಭೆ ಕರೆಯಲಾಗಿದೆ.
ಜೈಪಾಲ್ ಇಒ, ತಾಪಂ
ಅನುದಾನ ಹಂಚಿಕೆಯಲ್ಲಿ ತಾರತಮ್ಯ !: ತಾಪಂ ಅನುದಾನ ಹಂಚಿಕೆಯಲ್ಲಿ ತಾರತಮ್ಯವೆಸಗಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. 30 ಸದಸ್ಯರ ಬಲಾಬಲವುಳ್ಳ ತಾಪಂನಲ್ಲಿ ಇಬ್ಬರು ಗ್ರಾಪಂ ಚುನಾವಣೆಯಲ್ಲಿ ಗೆದ್ದಿರುವುದರಿಂದ ಅವರು ರಾಜೀನಾಮೆ ಕೊಟ್ಟಿದ್ದಾರೆ. ಹಾಗಾಗಿ, ರಾಜೀನಾಮೆ ಕೊಟ್ಟವರು ಕ್ಷೇತ್ರಗಳಿಗೆ ನೀಡಬೇಕಿರುವ ಅನುದಾನ ಸದ್ಬಳಕೆಯಾಗಲಿದೆಯೇ ಎಂಬ ಅನುಮಾನಗಳಿವೆ. ಅಧ್ಯಕ್ಷರು, ಇಒ ಪಕ್ಷಪಾತ ಧೋರಣೆ ಅನುಸರಿಸುತ್ತಾರೆಂಬ ಆರೋಪಗಳಿವೆ. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಈಗಲಾದರೂ ಮೌನಮುರಿಯಬೇಕಿದೆ.