

ಬೀದರ್: ಕಳೆದೆರಡು ವಾರಗಳಿಂದ ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವುದು ಆತಂಕ ಮೂಡಿಸಿರುವ ಬೆನ್ನಲ್ಲೇ ಶುಕ್ರವಾರ ಮಹಾಮಾರಿಗೆ ನಿವೃತ್ತ ತಹಸೀಲ್ದಾರ್ ಜಗನ್ನಾಥ ಸಿರ್ಸೆ (67) ಬಲಿಯಾಗಿದ್ದಾರೆ.
ಕಳೆದ ದಿ. 10ರಂದು ಜಗನ್ನಾಥ ಸಿರ್ಸೆ ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಇಲ್ಲಿನ ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಜಗನ್ನಾಥ ಅವರು ಮೂಲತಃ ಭಾಲ್ಕಿ ತಾಲೂಕಿನ ಕುಂಟೆಸಿರ್ಸೆ ಗ್ರಾಮದವರು. ನಗರದ ಶಿವನಗರದಲ್ಲಿ ವಾಸವಿದ್ದರು. ಕಾನೂನು ಪದವೀಧರರಾಗಿದ್ದ ಅವರು, ನಿವೃತ್ತಿ ಬಳಿಕ ಜಿಲ್ಲಾ ಕೋಟ್೯ ನಲ್ಲಿ ಪೂರ್ಣಪ್ರಮಾಣದಲ್ಲಿ ವಕೀಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ನಿಯಮದ ಪ್ರಕಾರ ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಇವರ ಪತ್ನಿ, ಒಬ್ಬ ಪುತ್ರನಿಗೂ ಪಾಸಿಟಿವ್ ಬಂದಿದ್ದು, ಬ್ರಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಎರಡು ವಾರದಿಂದ ಕರೊನಾ ಏರುಗತಿ ಶುರುವಾಗಿದೆ. ಕಳೆದ ಹತ್ತು ದಿನದಲ್ಲೇ 132 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಇದರೊಟ್ಟಿಗೆ ಸೋಂಕಿತರ ಸಾವಿನ ಪ್ರಕರಣವೂ ವರದಿಯಾಗುತ್ತಿರುವುದು ಗಡಿ ಜಿಲ್ಲೆ ಜನರಲ್ಲಿ ಮತ್ತೆ ಕರೊನಾತಂಕ ಮೂಡಿಸಿದೆ.