ಕರೊನಾಕ್ಕೆ ಹೆದರಿದ ಜನಪ್ರತಿನಿಧಿಗಳು, ಬಡ ವರ್ಗ, ಕೂಲಿ ಕಾರ್ಮಿಕರ ಗೋಳು ಕೇಳುವವರಿಲ್ಲ, ಸಾಮಾಜಿಕ ಜಾಲತಾಣಗಳಿಗೆ ಸೀಮಿತರಾದ ನಾಯಕರು

IMG-20210610-WA0070
Published on

ಆನೇಕಲ್: ಕರೊನಾ ಪಿಡುಗು ತಾಲೂಕಿನ ಅದೆಷ್ಟೋ ಜೀವಗಳನ್ನು ಬಲಿ ಪಡೆದಿದೆ. ಜಿಗಣಿ, ಬೊಮ್ಮಸಂದ್ರ, ಅತ್ತಿಬೆಲೆ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡು ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಆದರೆ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ತಾಲೂಕಿನ ಬಹುತೇಕ ಜನಪ್ರತಿನಿಧಿಗಳು ಮನೆ ಬಿಟ್ಟು ಹೊರ ಬರುತ್ತಿಲ್ಲ. ಇದರಿಂದಾಗಿ ಸಂಕಷ್ಟದಲ್ಲಿರುವ ಕುಟುಂಬಗಳ ಗೋಳು ಕೇಳುವವರೇ ಇಲ್ಲವಾಗಿದೆೆ.

ಗಡಿ ಭಾಗದ ಬಳ್ಳೂರು, ಅತ್ತಿಬೆಲೆ, ಸಮಂದೂರು, ಸೋಲೂರು, ಚೂಡಹಳ್ಳಿ, ಸರ್ಜಾಪುರ ಭಾಗದಲ್ಲಿ ಸಾಕಷ್ಟು ಕೂಲಿ ಕಾರ್ಮಿಕರು ಇದ್ದಾರೆ. ಕಳೆದ ಬಾರಿ ಗ್ರಾಪಂ ಚುನಾವಣೆ ಇದ್ದುದರಿಂದ ಸಾಕಷ್ಟು ಜನ ಆಹಾರ ಧಾನ್ಯ ಹಾಗೂ ಊಟ ವಿತರಿಸಿದ್ದರು. ಈ ಬಾರಿ ಯಾವುದೇ ಜನಪ್ರತಿನಿಧಿಗಳು ಬಡವರಿಗೆ ಸಹಾಯ ಮಾಡಲು ನಿರುತ್ಸಾಹ ತೋರುತ್ತಿದ್ದಾರೆ.

ಬಹುತೇಕ ಜನಪ್ರತಿನಿಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಸುಮ್ಮನಾಗುತ್ತಿದ್ದಾರೆ. ಇನ್ನೂ ಕೆಲವರು ನಾವು ಇದ್ದೇವೆ ಎಂದು ತೋರಿಸಿಕೊಳ್ಳುವ ಸಲುವಾಗಿ ಆಗಾಗ ಕೆಲವೊಂದು ಸಭೆ ಮಾಡಿಸುತ್ತಿದ್ದಾರೆ.

ಸಚಿವ ಸ್ಥಾನಮಾನ ಇದ್ದರೂ ದೂರಾಗದ ಬಿಗುಮಾನ: ಹೊರ ವರ್ತುಲ ರಸ್ತೆ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಮುನಿರಾಜು ಅವರು ಕಳೆದ ಬಾರಿ ಬಡವರಿಗೆ ಸಾಕಷ್ಟು ಆಹಾರಧಾನ್ಯ ಸಹಾಯ ಮಾಡಿದ್ದರು. ಈ ಬಾರಿ ಬಿಜೆಪಿಯ ಕೆಲ ನಾಯಕರ ವಿರುದ್ಧ ಮುನಿಸಿಕೊಂಡು ಮನೆಯಿಂದ ಹೊರಬಾರದೆ ಜನರ ಸಮಸ್ಯೆಯನ್ನೂ ಕೇಳಲು ನಿರಾಕರಿಸುತ್ತಿದ್ದಾರೆ. ಸರ್ಕಾರದ ಉನ್ನತ ಹುದ್ದೆ ಹೊಂದಿದ್ದರೂ ಮನೆ ಸೇರಿರುವ ಸಿ.ಮುನಿರಾಜು ವಿರುದ್ಧ ತಾಲೂಕಿನಾದ್ಯಂತ ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಇಂಥ ನಾಯಕರಿಗೆ ಸರ್ಕಾರ ಯಾವ ಹುದ್ದೆ ನೀಡಿದರೂ ಪ್ರಯೋಜನ ಇಲ್ಲ ಎಂಬ ಮಾತು ಕೇಳಿಬಂದಿದೆ.

ಬಿಜೆಪಿ ತಾಲೂಕು ಅಧ್ಯಕ್ಷರಿಂದ ಸಹಕಾರ ಇಲ್ಲ: ಕರೊನಾ 2ನೇ ಅಲೆ ಆರಂಭಕ್ಕೆ ಮುನ್ನ ವಾರಕ್ಕೆ ಒಂದೆರಡು ಸಭೆ ನಡೆಸಿ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷ ಸಂಘಟನೆ ಬಗ್ಗೆ ಸಾಕಷ್ಟು ಕಾರ್ಯಕ್ರಮ ರೂಪಿಸುತ್ತಿದ್ದ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರು, ಕರೊನಾ 2ನೇ ಅಲೆ ಪ್ರಾರಂಭವಾಗುತ್ತಿದ್ದಂತೆ ಬಡವರ ಹಿತಾಸಕ್ತಿಯನ್ನೇ ಮರೆತಿದ್ದಾರೆ.

ನಾಪತ್ತೆಯಾದ ಜನಪ್ರತಿನಿಧಿಗಳು: ಆನೇಕಲ್ ತಾಲೂಕಿನಲ್ಲಿ ಆಡಳಿತ ನಡೆಸುತ್ತಿರುವುದು ಕಾಂಗ್ರೆಸ್ ಆದರೂ ತಾಪಂ, ಜಿಪಂ ಹಾಗೂ ಗ್ರಾಪಂಗಳಲ್ಲಿ ಅತಿಹೆಚ್ಚು ಸ್ಥಾನ ಹೊಂದಿರುವುದು ಬಿಜೆಪಿ. ಜತೆಗೆ ಆರರಿಂದ ಏಳು ಜನ ಜನಪ್ರತಿನಿಧಿಗಳು ನಾವು ಶಾಸಕ ಸ್ಥಾನದ ಆಕಾಂಕ್ಷಿಗಳು ಎಂದು ಬೇರೆ ಸಮಯದಲ್ಲಿ ಬಿಜೆಪಿಯ ಕದ ತಟ್ಟುತ್ತಿದ್ದಾರೆ. ಈ ಯಾವುದೇ ನಾಯಕರು ಈ ಸಂದರ್ಭದಲ್ಲಿ ಕಾಣಿಸಿಕೊಳ್ಳದೇ ಇರುವುದರಿಂದ, ಬಿಜೆಪಿಯ ಆಂತರಿಕ ವಲಯದಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

ಸಂಘ ಸಂಸ್ಥೆಗಳೇ ಆಧಾರ:  ಅತ್ತಿಬೆಲೆ ಠಾಣೆ ಇನ್‌ಸ್ಪೆಕ್ಟರ್ ಕೆ.ವಿಶ್ವನಾಥ್, ಜಿಗಣಿ ಠಾಣೆ ಇನ್‌ಸ್ಪೆಕ್ಟರ್ ಬಿ.ಕೆ.ಶೇಖರ್ ಅವರು ಖಾಸಗಿ ಕಂಪನಿಗಳು, ಇನ್ಫೊಸಿಸ್ ಹಾಗೂ ರಾಮಕೃಷ್ಣ ಮಠದ ಸಹಭಾಗಿತ್ವದಲ್ಲಿ ಜಿಗಣಿ ಹಾಗೂ ಅತ್ತಿಬೆಲೆ ಭಾಗದಲ್ಲಿ ಆಸ್ಪತ್ರೆಗಳಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಆಹಾರಧಾನ್ಯದ ಕಿಟ್ ಒದಗಿಸಿದ್ದಾರೆ. ಜೆಡಿಎಸ್ ಯುವ ಘಟಕದಿಂದ ಊಟ ವಿತರಣೆ, ಬಹುಜನ ಸಮಾಜ ಪಕ್ಷದ ಅಧ್ಯಕ್ಷ ವೈ.ಚಿನ್ನಪ್ಪ ಚಿಕ್ಕಹಾಗಡೆ ಅವರು ಖಾಸಗಿ ವ್ಯಕ್ತಿಗಳ ಸಹಭಾಗಿತ್ವದಲ್ಲಿ ಆಹಾರಧಾನ್ಯದ ಕಿಟ್ ವಿತರಣೆ ಮಾಡಿದ್ದಾರೆ. ಹಾಗೆಯೇ ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಪ್ರಸಾದ್ ಹಾಗೂ ತಂಡದವರು ಅಗತ್ಯ ನೆರವು ನೀಡಿ ಬಡವರಿಗೆ ಆಸರೆಯಾಗಿದ್ದಾರೆ.

ಜೆಡಿಎಸ್ ಯುವ ಘಟಕದಿಂದ ಆನೇಕಲ್ ಪಟ್ಟಣದಲ್ಲಿ ಪ್ರತಿದಿನ ಬಡವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net