

ಮುಳಗುಂದ: ಕರೊನಾಕ್ಕೆ ಹೆದರಿ ಸಮೀಪದ ಸೀತಾಲಹರಿ ಗ್ರಾಮಸ್ಥರು ಮನೆಗಳನ್ನು ತೊರೆದು ಸಮೀಪದ ಹೊಲಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.
ಕೊಪ್ಪಳ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿದ್ದ ಗ್ರಾಮದ ವ್ಯಕ್ತಿ ಕರೊನಾ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮವೇ ತತ್ತರಿಸಿ ಹೋಗಿದೆ. ಸೀತಾಲಹರಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅನೇಕ ಜನ ಸಹಾಯಕ್ಕೆ ಹೋಗಿದ್ದರು. ಕೊನೆಯ ಕ್ಷಣದಲ್ಲಿ ಆತನಿಗೆ ಉಸಿರಾಟದ ತೊಂದರೆಯಾದಾಗ ಬಾಯಲ್ಲಿ ಬಾಯಿಟ್ಟು ಉಸಿರು ಕೊಟ್ಟಿದ್ದರು. ಕಿರುನಾಲಿಗೆ ಬಿದ್ದಿದೆ ಎಂದು ಬಾಯಲ್ಲಿ ಕೈ ಹಾಕಿ ಕಿರುನಾಲಿಗೆ ಒತ್ತಿದ್ದರು. ಈತನ ಸಂಪರ್ಕದಿಂದಾಗಿ 10 ಜನರಿಗೆ ಕರೊನಾ ಸೋಂಕು ದೃಢವಾಗಿದೆ. ಹೀಗಾಗಿ ಜನ ಆತಂಕಕ್ಕೊಳಗಾಗಿದ್ದಾರೆ.
ವಿಷ ಜಂತುಗಳ ಭಯವನ್ನು ಲೆಕ್ಕಿಸದೇ ಅನೇಕ ಕುಟುಂಬಗಳು ಮಕ್ಕಳು, ವೃದ್ಧರು ಮತ್ತು ಜಾನುವಾರುಗಳೊಂದಿಗೆ ಹೊಲದಲ್ಲಿ, ಸಮೀಪದ ಕ್ರಷರ್ಗಳಲ್ಲಿ, ರಸ್ತೆ ಪಕ್ಕದ ಬಯಲು ಜಾಗದಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.
ಕಲ್ಲು ಕ್ವಾರಿಯ ಭಯ:
ಒಂದೆಡೆ ಹಾವು, ಚೇಳುಗಳ ಭಯ. ಇನ್ನೊಂದೆಡೆ ಕ್ರಷರ್ನವರು ರಾತ್ರಿ ಸಮಯದಲ್ಲಿ ಯಾವಾಗ ಬ್ಲಾಸ್ಟ್ ಮಾಡುತ್ತಾರೋ ಯಾವ ಕಲ್ಲು ಸಿಡಿಯುತ್ತದೆಯೋ ಎಂಬ ಭಯದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದೇವೆ ಎನ್ನುತ್ತಾರೆ ಟೆಂಟ್ ಹಾಕಿಕೊಂಡವರು.
ಕಳೆದ ಮೂರು ದಿನಗಳಿಂದ ಇಲ್ಲಿದ್ದೇವೆ. ದುಡಿಯೋದಕ್ಕೆ ದುಡಿಮೆಯಿಲ್ಲ. ಕೈಯಲ್ಲಿ ದುಡ್ಡಿಲ್ಲ. ಹಸಿದ ಹೊಟ್ಟೆಯಲ್ಲಿ ಗೋಳಾಡುತ್ತಿದ್ದೇವೆ. ಕರೊನಾ ಹೆಮ್ಮಾರಿಯಿಂದ ದೂರವಿದ್ದು ಬದುಕಿದರೆ ಸಾಕು ಎಂಬ ನಿರ್ಧಾರಕ್ಕೆ ಬಂದು ಜೀವನ ಕಳೆಯುತ್ತಿದ್ದೇವೆ. | ಭೀಮಪ್ಪ ವಡ್ಡರ ಸೀತಾಲಹರಿ ಗ್ರಾಮಸ್ಥ
ಗ್ರಾಮದ ಅಂಗಡಿಗಳೆಲ್ಲ ಬಂದಾಗಿದ್ದು, ನಮಗೆ ಬೇಕಾದ ದಿನಸಿ ಸಾಮಾನು, ತರಕಾರಿ ತರಲು ಬೇರೆ ಗ್ರಾಮಗಳಿಗೆ ಅನಿವಾರ್ಯವಾಗಿ ಹೋಗಬೇಕಿದೆ. ಬೇರೆ ಊರಿನ ಜನ ನಮ್ಮನ್ನು ನೋಡುವ ದೃಷ್ಟಿಯೇ ಬೇರೆಯಾಗಿದೆ. ಹೀಗಾಗಿ ನಾವು ಹಿಂಸೆ ಅನುಭವಿಸುತ್ತಿದ್ದೇವೆ.| ತಿಪ್ಪಣ್ಣ ಬಸಪ್ಪ ವಡ್ಡರ ಸೀತಾಲಹರಿ ಗ್ರಾಮಸ್ಥ
EndFragment