ಕರೊನಾಕ್ಕೆ ಮತ್ತೊಬ್ಬ ವೃದ್ಧ ಬಲಿ

B SHARAT DC Photo
Published on

ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಸಾವಿನ ಸರಣಿಯೂ ಮುಂದುವರಿದಿದೆ. ಚೇತರಿಕೆ ಪ್ರಮಾಣದಲ್ಲೂ ಏರಿಕೆ ಕಂಡಿದ್ದರಿಂದ ಆತಂಕದ ನಡುವೆಯೂ ಜನರಲ್ಲಿ ನೆಮ್ಮದಿ ಮೂಡಿಸಿದೆ.
61 ವರ್ಷದ ವೃದ್ಧ (ಪಿ-10270) ಕರೊನಾಕ್ಕೆ ಬಲಿಯಾಗಿದ್ದು, ಮೃತರ ಸಂಖ್ಯೆ 14ಕ್ಕೇರಿದೆ. 35 ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಕ್ಯೆ 1289ಕ್ಕೇರಿದೆ.
ಮೃತ ವೃದ್ಧ ಕಲಬುರಗಿ ನಗರದ ಇಸ್ಲಾಮಬಾದ್ ಕಾಲನಿ ನಿವಾಸಿ. ತೀವ್ರ ರಕ್ತದೊತ್ತಡ ಮತ್ತು ಉಸಿರಾಟ ತೊಂದರೆಯಿಂದಾಗಿ 22ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಕೊನೆಯುಸಿರೆಳೆದಿದ್ದ. ಈತನಿಗೆ ಎಲ್ಲಿಂದ ಹಾಗೂ ಹೇಗೆ ಕರೊನಾ ಅಂಟಿತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಗುರುವಾರ 31 ಜನ ಸೇರಿ ಇದುವರೆಗೆ 860 ಸೋಂಕಿತರು ಚೇತರಿಸಿಕೊಂಡು ಮನೆಗೆ ತೆರಳಿದ್ದು, 415 ಸೋಂಕಿತರ ಚಿಕಿತ್ಸೆ ಮುಂದುವರಿದಿದೆ. ಮೂರು ವರ್ಷದ ಹೆಣ್ಣು, 13 ವರ್ಷದ ಬಾಲಕಿ ಹಾಗೂ 11 ವರ್ಷದ ಬಾಲಕ ಸೇರಿ ಗುರುವಾರ 20 ಪುರುಷರು, 15 ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ನಾಲ್ವರ ವಿರುದ್ಧ ಎಫ್ಐಆರ್
ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದ ಕುಸನೂರ ಗ್ರಾಮದ ನಾಲ್ವರ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಮಲ್ಲೇಶ ತಂಗಾ ತಿಳಿಸಿದ್ದಾರೆ. ಇಟಗಾ(ಕೆ)ದ ಒಬ್ಬನನ್ನು ಹೋಮ್ನಿಂದ ಸಾಂಸ್ಥಿಕ ಕ್ವಾರಂಟೈನ್ಗೆ ಸ್ಥಳಾಂತರಿಸಲಾಗಿದೆ. ಕೋವಿಡ್ ಹರಡದಂತೆ ಮಹಾರಾಷ್ಟ್ರದಿಂದ ಬಂದವರನ್ನು 7 ದಿನ ಸಾಂಸ್ಥಿಕ ಕ್ವಾರಂಟೈನ್, ಕೋವಿಡ್-19 ಪರೀಕ್ಷೆ ಬಳಿಕ 7 ದಿನ ಹೋಮ್ ಕ್ವಾರಂಟೈನ್ ಮಾಡಲಾಗುತ್ತದೆ. ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯಗಳಿಂದ ಬರುವವರಿಗೆ 14 ದಿನ ಹೋಮ್ ಕ್ವಾರಂಟೈನ್ ಮಾಡಲಾಗುವುದು. ಸರ್ಕಾರದ ಆದೇಶ ಪಾಲಿಸದವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net