

ತುಮಕೂರು: ಕರೊನಾಕ್ಕೆ ಮತ್ತಿಬ್ಬರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 20 ಮಂದಿ ಸಾವನ್ನಪ್ಪಿರುವುದು ಹೆಚ್ಚಿನ ಆತಂಕ ಮೂಡಿಸಿದೆ. ಶನಿವಾರ 23 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 653ಕ್ಕೇರಿದೆ.
ಸ್ಮಾರ್ಟ್‌ಸಿಟಿ ತುಮಕೂರು ನಗರದಲ್ಲೇ 16 ಮಂದಿಯಲ್ಲಿ ಸೋಂಕು ಕಾಣಿಸಿದೆ. ಇನ್ನು ಕುಣಿಗಲ್ 3, ಕೊರಟಗೆರೆ 2 ಹಾಗೂ ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕಿನಲ್ಲಿ ಓರ್ವರಿಗೆ ಸೋಂಕು ದೃಢಪಟ್ಟಿದೆ. ತುಮಕೂರು ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ 300ರ ಸನಿಹಕ್ಕೆ ತಲುಪಿರುವುದು ಜಿಲ್ಲಾಡಳಿತಕ್ಕೆ ತಲೆಬಿಸಿ ತಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ 653 ಜನರಿಗೆ ಸೋಂಕು ತಗುಲಿದ್ದು, ಈವರೆಗೆ 287ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 346 ಸಕ್ರಿಯ ಪ್ರಕರಣಗಳಿದ್ದು 10 ಜನ ತೀವ್ರ ನಿಗಾ ಘಟಕದಲ್ಲಿದ್ದಾರೆ. ಶನಿವಾರ 20 ಮಂದಿ ಗುಣಮುಖರಾಗಿದ್ದಾರೆ.
ಮತ್ತಿಬ್ಬರು ಬಲಿ: ತುಮಕೂರು ನಗರದ ಮಹಿಳೆಯರಿಬ್ಬರನ್ನು ಕರೊನಾ ಬಲಿಪಡೆದಿದೆ. ಸದಾಶಿವನಗರದ 23 ವರ್ಷದ ಮಹಿಳೆ ತೀವ್ರ ಉಸಿರಾಟ ತೊಂದರೆ, ಜ್ವರದಿಂದ ಬಳಲುತ್ತಿದ್ದು, ಜು.9ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜು.13ರಂದು ಮೃತಪಟ್ಟಿದ್ದರು. ಶನಿವಾರ ಸೋಂಕು ಇರುವುದು ದೃಢಪಟ್ಟಿದೆ. ಪರೀಕ್ಷೆ ವರದಿ ಬಾರದ ಹಿನ್ನೆಲೆಯಲ್ಲಿ ಕರೊನಾ ಶಂಕಿತಳೆಂದು ಪರಿಗಣಿಸಿ ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.ಜಯನಗರದ 58 ವರ್ಷದ ಮಹಿಳೆ ಜ್ವರ, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಜು.16 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ತುಮಕೂರಲ್ಲೇ 16 ಪ್ರಕರಣ: ತುಮಕೂರು ನಗರದಲ್ಲೇ 16 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಪರ್ಕ ಹೊಂದಿರುವ ಬಟವಾಡಿಯ 32 ವರ್ಷದ ಮಹಿಳೆ, ಶಾಂತಿನಗರದ 35 ವರ್ಷದ ವ್ಯಕ್ತಿ, ವಿನಾಯಕನಗರದ 55 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಜ್ವರ, ಕೆಮ್ಮು ಕಾಣಿಸಿಕೊಂಡಿದ್ದ ಚಿತ್ರದುರ್ಗ ಪ್ರಯಾಣ ಹಿನ್ನೆಲೆಯ ಶಿರಾಗೇಟ್‌ನ 55 ವರ್ಷದ ವ್ಯಕ್ತಿ, ಬೆಂಗಳೂರು ಪ್ರಯಾಣ ಹಿನ್ನೆಲೆಯ ಕ್ಯಾತಸಂದ್ರ ಮೈದಾಳ ರಸ್ತೆ ಟಿವಿಎಸ್ ಬಡಾವಣೆಯ 47 ವರ್ಷದ ಮಹಿಳೆ ಹಾಗೂ ಆಂಧ್ರಪ್ರದೇಶ ಪ್ರಯಾಣ ಹಿನ್ನೆಲೆಯ ಎಸ್‌ಎಲ್‌ಎನ್ ಬಡಾವಣೆಯ 50 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಕ್ಯಾತಸಂದ್ರ ಸಂತೆಬೀದಿಯ 55 ವರ್ಷದ ವ್ಯಕ್ತಿ, ಜೈಪುರ ಕೆಎಚ್‌ಬಿ ಕಾಲನಿಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ 59 ವರ್ಷದ ಮಹಿಳೆ, ವಿನಾಯಕನಗರದ 46 ವರ್ಷದ ವ್ಯಕ್ತಿ, ಶಿರಾಗೇಟ್ ಎಎಂ ಪಾಳ್ಯದ 48 ವರ್ಷದ ವ್ಯಕ್ತಿ, ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಕುವೆಂಪುನಗರದ 32 ವರ್ಷದ ವ್ಯಕ್ತಿ, ಸದಾಶಿವನಗರದ 52 ವರ್ಷದ ವ್ಯಕ್ತಿ, ಬಟವಾಡಿಯ 5 ವರ್ಷದ ಗಂಡು ಮಗು ಹಾಗೂ ಭೀಮಸಂದ್ರದ 62 ವರ್ಷದ ವೃದ್ಧನಿಗೂ ಸೋಂಕು ಕಾಣಿಸಿಕೊಂಡಿದೆ. ಕೊರಟಗೆರೆ ಪಟ್ಟಣದ ಮುನೇಶ್ವರದೇವಸ್ಥಾನ ಬಳಿಯ 26 ವರ್ಷದ ಗರ್ಭಿಣಿಗೆ ಮೈಕೈ ನೋವು, ಸುಸ್ತು ಕಾಣಿಸಿಕೊಂಡಿದ್ದು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಜು.6ರಂದು ಚಿಕಿತ್ಸೆ ಪಡೆದಿದ್ದರು. ಈ ವೇಳೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು ಈಗ ಸೋಂಕು ಇರುವುದು ದೃಢಪಟ್ಟಿದೆ. ಕೊರಟಗೆರೆ ಪಟ್ಟಣದ 61 ವರ್ಷದ ವೃದ್ಧೆ ದೊಡ್ಡಬಳ್ಳಾಪುರದ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು ಸೋಂಕು ತಗುಲಿರುವುದು ದೃಢವಾಗಿದೆ. ಚಿಕ್ಕನಾಯಕನಹಳ್ಳಿಯ ಎಲ್ಲೇನಹಳ್ಳಿ 24 ವರ್ಷದ ಯುವಕ, ಗುಬ್ಬಿ ತಾಲೂಕಿನ 60 ವರ್ಷದ ವೃದ್ಧರಿಗೆ ಮೈಕೈ ನೋವು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದ್ದು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು ಸೋಂಕು ತಗುಲಿರುವುದು ದೃಢಪಟ್ಟಿದೆ.
ಕರೊನಾ ಮಹಾಮಾರಿಗೆ 20 ಬಲಿ!: ಜಿಲ್ಲೆಯಲ್ಲಿ ಕರೊನಾ ತಕ್ಕಮಟ್ಟಿಗೆ ಹತೋಟಿಗೆ ಬರುತ್ತಿದ್ದು ಒಂದೆಡೆ ಗುಣಮುಖರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ, ಮಹಾಮಾರಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 653 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 346 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಕರೊನಾದಿಂದಾಗಿ 20 ಜನರು ಸಾವನ್ನಪ್ಪಿದ್ದಾರೆ. ಜು.13ರಂದು ಮೃತಪಟ್ಟ ಸದಾಶಿವನಗರದ ಮಹಿಳೆಗೆ ಇನ್ನೂ 23 ವರ್ಷ ವಯಸ್ಸು ಎಂಬುದು ಗಮನಾರ್ಹ. ಉಳಿದಂತೆ ಎಲ್ಲರೂ 50 ವರ್ಷ ಮೇಲ್ಪಟ್ಟವರೇ ಆಗಿದ್ದು ಬೇರೆಬೇರೆ ರೋಗಗಳಿಂದ ಬಳಲುತ್ತಿದ್ದರು.
ಕುಣಿಗಲ್‌ನಲ್ಲಿ ಮೂರು ಪ್ರಕರಣ: ಪಾರ್ಶ್ವವಾಯುಗೆ ತುತ್ತಾಗಿರುವ ಕುಣಿಗಲ್ ತಾಲೂಕು ಸುಂದರಕುಪ್ಪೆಯ 62 ವರ್ಷದ ವೃದ್ಧೆ , ಕುಣಿಗಲ್ ಪಟ್ಟಣದ ಉಡಸಂಜೆ ಎದುರು ರಸ್ತೆಯ 55 ವರ್ಷದ ವ್ಯಕ್ತಿ, ಸೋಂಕಿತರ ಸಂಪರ್ಕ ಹೊಂದಿದ್ದ ಕುವೆಂಪುನಗರದ 48 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.