ಕರೊನಾಕ್ಕಿಂತ ಕೆಎಫ್​ಡಿ ಆತಂಕ

12sdp1
Published on

ವಿಜಯವಾಣಿ ಸುದ್ದಿಜಾಲ ಕಾರವಾರ/ಸಿದ್ದಾಪುರ

ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಕರೊನಾಕ್ಕಿಂತ ಮಂಗನ ಕಾಯಿಲೆ (ಕೆಎಫ್​ಡಿ)ಯ ಭೀತಿ ಹೆಚ್ಚಿದೆ. ಕಳೆದ ಎರಡು ದಿನಗಳಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಹೊಸ 9 ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟಾರೆ ಸೋಂಕಿತರ ಸಂಖ್ಯೆ 33ಕ್ಕೆ ಏರಿದೆ.

ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಬ್ಬಗಾರದ 38 ವರ್ಷದ ವ್ಯಕ್ತಿಗೆ, ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕೆರಮನೆಯ 17 ವರ್ಷದ ಬಾಲಕನಿಗೆ, ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ಜೊಗಿನಮಠದ 37 ವರ್ಷದ ಮಹಿಳೆ ಹಾಗೂ 30 ವರ್ಷದ ವ್ಯಕ್ತಿಗೆ ಮಂಗನಖಾಯಿಲೆ ಇರುವುದು ಭಾನುವಾರ ಖಚಿತ ಪಟ್ಟಿದೆ. ಸೋಮವಾರ ಇನ್ನೂ ಐದು ಹೊಸ ಪ್ರಕರಣಗಳು ಖಚಿತವಾಗಿವೆ ಎಂಬ ಮಾಹಿತಿ ಬಂದಿದೆ. ಆದರೆ, ಆರೋಗ್ಯ ಅಧಿಕಾರಿಗಳು ಇದುವರೆಗೂ ಅದನ್ನು ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ.

ಹೊಸ ಪ್ರದೇಶಗಳಿಗೆ ವಿಸ್ತರಣೆ: ಕಳೆದ ವರ್ಷ 86 ಜನರಲ್ಲಿ ಸೋಂಕು ಕಂಡು ಬಂದಿತ್ತು. ಅದರಲ್ಲಿ 6 ಜನರು ಮೃತಪಟ್ಟಿದ್ದರು. ಈ ವರ್ಷ ಕಾಯಿಲೆ ಸಿದ್ದಾಪುರ ತಾಲೂಕಿಗೆ ಮಾತ್ರ ಸೀಮಿತವಾಗಿರದೆ ಅಂಕೋಲಾಕ್ಕೂ ವಿಸ್ತರಿಸಿದೆ. ಅಂಕೋಲಾ ತಾಲೂಕಿನ ಒಬ್ಬ ವ್ಯಕ್ತಿ ಕಾಯಿಲೆಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ. ಯಲ್ಲಾಪುರ, ಜೊಯಿಡಾದಲ್ಲೂ ಮಂಗಗಳ ಸಾವು ಸಂಭವಿಸುತ್ತಿದೆ. ಅವುಗಳ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೇನೋ ಕಳಿಸಲಾಗುತ್ತಿದೆ. ಆದರೆ, ವರದಿ ತೀವ್ರ ವಿಳಂಬವಾಗುತ್ತಿದೆ.

ಆರೋಗ್ಯ ಇಲಾಖೆ ಎಲ್ಲರೂ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಬೇಕು. ರೋಗ ಬಂದ ಶಿವಮೊಗ್ಗ ಜಿಲ್ಲೆಯವರಿಗೆ ಮಣಿಪಾಲದಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಜಿಲ್ಲೆಯ ಜನರಿಗೂ ಉಚಿತ ಚಿಕಿತ್ಸೆ ದೊರೆಯುವಂತಾಗಬೇಕು. | ಸತೀಶ ಹೆಗಡೆ, ಕಿಲಾರ ಮಾವಿನಗುಂಡಿ ಕೃಷಿಕ

ಎಲ್ಲರೂ ಲಸಿಕೆ ಪಡೆಯಬೇಕು ಎಂದು ಕೌನ್ಸೆಲಿಂಗ್ ಮಾಡುತ್ತಿದ್ದೇವೆ. ರೋಗ ಬರದಂತೆ ಡಿಎಂಪಿ ತೈಲ ವಿತರಣೆ ಮಾಡಿದ್ದೇವೆ. ಕಾಯಿಲೆ ಕಾಣಿಸಿಕೊಂಡರೆ ಉಚಿತ ಚಿಕಿತ್ಸೆ ನೀಡುವ ಭರವಸೆಯನ್ನು ಜನರಿಗೆ ನೀಡಿದ್ದೇವೆ. | ಡಾ.ಜಿ.ಎನ್.ಅಶೋಕ ಕುಮಾರ್ ಡಿಎಚ್​ಒ, ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net