ಕರೊನಾ ಹೆಮ್ಮಾರಿಗೆ ಅವಳಿನಗರ ಸ್ತಬ್ಧ

carona logo
Published on

ಗದಗ: ಕರೊನಾ ಸೋಂಕು ತಡೆಗೆ ಸರ್ಕಾರ ಕಟ್ಟೆಚ್ಚರ ವಹಿಸಿದ್ದರಿಂದ ಭಾನುವಾರ ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲೆಯ ಪಟ್ಟಣಗಳಲ್ಲಿ ಜನರ ಸಂಚಾರ ವಿರಳವಾಗಿತ್ತು.

ಚಿತ್ರಮಂದಿರ, ಮಾಲ್​ಗಳು, ಶಾಲಾ- ಕಾಲೇಜ್​ಗಳನ್ನು ಬಂದ್ ಮಾಡಲು ಆದೇಶಿಸಿದ್ದರಿಂದ ಜನ ಸಂಚಾರ ಕಡಿಮೆ ಇದೆ. ಮಹಾಮಾರಿಗೆ ಹೆದರಿ ಅನೇಕರು ಮನೆ ಬಿಟ್ಟು ಹೊರ ಬರುತ್ತಿಲ್ಲ. ತೀರಾ ಅನಿವಾರ್ಯ ಇದ್ದವರು ಮಾತ್ರ ಹೊರಗಡೆ ಬರುತ್ತಿದ್ದಾರೆ.

ಜಿಲ್ಲಾಡಳಿತದ ಸೂಚನೆ ಮೀರಿ ಅನೇಕ ಫಾರ್ಮಸಿಗಳಲ್ಲಿ ಮಾಸ್ಕ್​ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ದರ ಹೆಚ್ಚಳ ಕುರಿತು ಪ್ರಶ್ನಿಸಿದರೆ ಫಾರ್ಮಸಿ, ಅಂಗಡಿಗಳ ಮಾಲೀಕರು ನಮ್ಮ ಬಳಿ ಮಾಸ್ಕ್ ಖಾಲಿ ಎಂದು ವಾಪಸ್ ಕಳಿಸುವ ಪ್ರಸಂಗಗಳು ನಡೆದಿವೆ. ಹೀಗಾಗಿ ಜನರು ಮರು ಮಾತನಾಡದೆ ಮಾಸ್ಕ್​ಗಳನ್ನು ಖರೀದಿಸುತ್ತಿದ್ದಾರೆ. ಹಲವರು ದರ ಹೆಚ್ಚಳದಿಂದ ಮಾಸ್ಕ್​ಗಳನ್ನು ಖರೀದಿಸದೇ ಹೊರಟು ಹೋಗುತ್ತಿದ್ದಾರೆ.

ಮುಂಜಾಗ್ರತೆ ಕ್ರಮ: ಕೆಮ್ಮು, ಸೀನುವುದು ಸೇರಿ ಇತರೆ ಲಕ್ಷಣಗಳು ಕಂಡುಬಂದರೆ ಜನರು ಉದಾಸೀನ ಮಾಡದೆ ತಾಲೂಕು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಕರೊನಾ ವೈರಸ್ ಕುರಿತು ಭಯಪಡುವ ಅಗತ್ಯವಿಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಕಳೆದೆರಡು ದಿನಗಳ ಹಿಂದೆ ನರಗುಂದ ಮೂಲದ ಇಬ್ಬರು ಹಂಪಿ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದ್ದಾರೆ. ಈ ಇಬ್ಬರೂ ಪ್ರಯಾಣಿಕರಿದ್ದ ಬೋಗಿಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಇದ್ದರು. ಹೀಗಾಗಿ ಇಬ್ಬರಿಗೆ ಭಾನುವಾರ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಕರೊನಾ ವೈರಸ್​ನ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ.

ಮೃಗಾಲಯ ಬಂದ್: ಕರೊನಾ ವೈರಸ್ ತಡೆಗಟ್ಟಲು ಮಾ. 14ರಿಂದ 23ರವರೆಗೆ ಬಿಂಕದಕಟ್ಟಿ ಕಿರುಮೃಗಾಲಯವನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿಲ್ಲ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆದೇಶದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಎಫ್​ಒ ಸೂರ್ಯಸೇನ ತಿಳಿಸಿದ್ದಾರೆ.

ಮುಂಜಾಗ್ರತೆಯೇ ಮದ್ದು: ದೇಶವನ್ನು ತಲ್ಲಣಗೊಳಿಸಿರುವ ಕರೊನಾ ವೈರಸ್ ಸೃಷ್ಟಿಸಿರುವ ಕ್ಲಿಷ್ಟಕರ ವಾತಾವರಣದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ವೈರಸ್ ನಿಯಂತ್ರಣದಲ್ಲಿ ವೈಫಲ್ಯ ಕಂಡು ಬಂದರೆ ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲಾಗುವುದು. ಈಗಾಗಲೇ ಈ ಕುರಿತು ವಿಧಾನಸಭೆಯಲ್ಲಿ ರ್ಚಚಿಸಲಾಗಿದೆ. ಕರೊನಾ ವೈರಸ್ ದೇಶದ ಮೇಲೆ ವೈರಿ ಮಾದರಿಯಲ್ಲಿ ಬಂದೆರಗಿದ್ದು, ಇದನ್ನು ಮೆಟ್ಟಿ ನಿಲ್ಲಬೇಕಿದೆ ಎಂದರು.

ಗದಗ ಜಿಮ್್ಸ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಸಂಶಯಾಸ್ಪದ ರೋಗಿಗಳ ಸಂಪರ್ಕಕ್ಕೆ ಹೋಗಬಾರದು. ಸರ್ಕಾರ ನೀಡುವ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ದಿ. ಕೆ.ಎಚ್. ಪಾಟೀಲರ 96ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಮಾ. 16ರಂದು ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ರಾಜ್ಯಪಾಲ ವಜೂಭಾಯ ವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವಾರು ಗಣ್ಯರು ಭಾಗವಹಿಸುವವರಿದ್ದರು. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಾರ್ಯಕ್ರಮ ರದ್ದಾಗಿದೆ ಎಂದು ವಿವರಿಸಿದರು.

ಪರಿಸರ ಶುದ್ಧವಾಗಿದ್ದರೆ ರೋಗ ದೂರ

ಗದಗ: ವೈಯುಕ್ತಿಕ ಸ್ವಚ್ಛತೆ, ಮನೆ ಹಾಗೂ ನಮ್ಮ ಸುತ್ತಲಿನ ಪರಿಸರ ಪರಿಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ವ್ಯಕ್ತಿಗಳೊಂದಿಗೆ ಪರಸ್ಪರ ಹಸ್ತಲಾಘವ ಮಾಡದೆ ಅಂತರ ಕಾಯ್ದುಕೊಳ್ಳಬೇಕು ಎಂದು ಗದಗ ಜಿಮ್್ಸ ಕಾಲೇಜ್​ನ ಪ್ರಾಧ್ಯಾಪಕ ಸ್ಟೀಫನ್ ಜಾನ್ ಹೇಳಿದರು.

ಸ್ಥಳೀಯ ಕಳಸಾಪೂರ ರಸ್ತೆಯ ಶ್ರೀರಾಮನಗರದಲ್ಲಿ ಗದಗ-ಬೆಟಗೇರಿ ರೋಟರಿ ಕ್ಲಬ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕರೊನಾ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರೊನಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವು ಸಂದೇಶಗಳು ಹರಿದಾಡುತ್ತಿದ್ದು, ಅದರಲ್ಲಿ ಕೆಲವು ವಾಸ್ತವಿಕವಾಗಿವೆ. ಹಲವರು ಜನರಲ್ಲಿ ಭೀತಿ ಉಂಟು ಮಾಡುತ್ತಿರುವುದು ವಿಷಾದದ ಸಂಗತಿ ಎಂದರು.

ಜಿಲ್ಲಾಧಿಕಾರಿ ಸೇರಿ ಜಿಲ್ಲಾ ಮಟ್ಟದ ಹಿರಿಯ ತಜ್ಞ ವೈದ್ಯರು ನೀಡುವ ಮಾಹಿತಿಯೇ ಅಧಿಕೃತ ಮಾಹಿತಿಯಾಗಿದೆ. ಸಾರ್ವಜನಿಕರು ಆರೋಗ್ಯ ಇಲಾಖೆ ಹಾಗೂ ತಜ್ಞ ವೈದ್ಯರು ನೀಡುವ ಸೂಚನೆಗಳನ್ನು ಅನುಸರಿಸುವ ಮೂಲಕ ಕರೊನಾ ಸೋಂಕು ಹರಡದಂತೆ ಕ್ರಮ ವಹಿಸಬೇಕಿದೆ ಎಂದರು.

ರೋಟರಿ ವೆಲ್ಪೇರ್ ಸೊಸೈಟಿ ಕಾರ್ಯದರ್ಶಿ ಶ್ರೀಧರ ಸುಲ್ತಾನಪೂರ ಮಾತನಾಡಿ, ಪೋಲಿಯೋ ನಿಮೂಲನೆಗೆ ರೋಟರಿ ಕ್ಲಬ್ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕಾರ್ಯ ಮಾಡಿದ್ದು ಸ್ಮರಣೀಯ. ಅದೇ ರೀತಿಯಲ್ಲಿ ಕರೊನಾ ಸೋಂಕು ಹರಡದಂತೆ ಜನಸಮುದಾಯದಲ್ಲಿ ಜಾಗೃತಿ ಮೂಡಿಸಲು ಜನರ ಮನೆಬಾಗಿಲಿಗೆ ಬಂದು ಕೆಲಸ ಮಾಡುತ್ತಿದೆ ಎಂದರು. ರೋಟರಿ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ ಹಾಗೂ ಕಾರ್ಯದರ್ಶಿ ನರೇಶ ಜೈನ್ ಮಾತನಾಡಿದರು.

ಸಭೆ ಮುಂದೂಡಿಕೆ

ಗದಗ: ಅಖಿಲ ಭಾರತ ವೀರಶೈವ ಮಹಾಸಭಾದ 45ನೇ ವಾರ್ಷಿಕ ಪ್ರತಿನಿಧಿಗಳ ಸಾಮಾನ್ಯ ಸಭೆ ಮಾ. 16ರಂದು ಬೆಂಗಳೂರಿನ ತರಳಬಾಳು ಕೇಂದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ದಿನಾಂಕವನ್ನು ನಂತರ ತಿಳಿಸಲಾಗುತ್ತದೆ ಎಂದು ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಶಾಸಕ ಈಶ್ವರ ಖಂಡ್ರೆ ತಿಳಿಸಿದ್ದಾರೆ ಎಂದು ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕೊರ್ಲಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮರೋಪಾದಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ

ಶಿರಹಟ್ಟಿ: ಮಹಾಮಾರಿ ಕರೊನಾ ವೈರಸ್ ತಡೆಗೆ ತಾಲೂಕಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದ್ದು ಶಾಸಕ ರಾಮಣ್ಣ ಲಮಾಣಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ವೈರಸ್ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಯುದ್ಧೋಪಾದಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಾಸ್ಪತ್ರೆಗಳಲ್ಲಿ ಪ್ರತ್ಯೇಕ 5 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಔಷಧ ವ್ಯಾಪಾರಿಗಳು ಮಾಸ್ಕ್​ಗೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದು ಮಾರಾಟ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ನಿಗಾವಹಿಸಲು ಸೂಚನೆ ನೀಡಿದೆ ಎಂದರು.

ಆಸ್ಪತ್ರೆ ವ್ಯೆದ್ಯಾಧಿಕಾರಿ ಡಾ. ಚಂದ್ರು ಲಮಾಣಿ ಮಾತನಾಡಿ, ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಶನ್ ವಾರ್ಡ್ ಸ್ಥಾಪಿಸಿ, ಅಲ್ಲಿ 5 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ವೈದ್ಯ ಸಿಬ್ಬಂದಿಗೆ ರಕ್ಷಣಾತ್ಮಕ ಉಡುಗೆ ತೊಡುಗೆ, ಚಿಕಿತ್ಸೆಗೆ ಅಗತ್ಯವಿರುವ ವೆಂಟಿಲೇಟರ್, ಆಕ್ಷಿಜನ್ ಸಿಲಿಂಡರ್ ಇನ್ನಿತರ ಉಪಕರಣಗಳನ್ನು ಸಿದ್ಧತಾ ಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ. ಆಕಸ್ಮಾತ್ ಶಂಕಿತ ರೋಗಿಗಳು ಕಂಡು ಬಂದರೆ ಅವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಡಾ. ರಾಜೇಶ, ಡಾ. ಗೋಪಾಲರಾಜ್, ಡಾ. ಸುಧಾ, ಡಾ. ಸಂಜೀವ ಬಿರಾದಾರ, ವಿ.ವಿ. ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ಶಿರಹಟ್ಟಿ ಮಂಡಲ ಬಿಜೆಪಿ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಮಹಾದೇವ ಗಾಣಿಗೇರ, ಪರಶುರಾಮ ಡೊಂಕಬಳ್ಳಿ, ಶ್ರೀನಿವಾಸ ಬಾರಬರ, ಅಕ್ಬರ ಯಾದಗೀರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net