

ಗದಗ: ಜಿಲ್ಲೆಯಲ್ಲಿ ಮೂರನೇ ಕರೊನಾ ವೈರಸ್ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಒಂದು ಮತ್ತು ಎರಡನೇ ಕೇಸ್ ಪತ್ತೆಯಾಗಿರುವ ರಂಗನವಾಡಿ ಗಲ್ಲಿಯಿಂದಲೇ ಮೂರನೇ ಕೇಸ್ ಪತ್ತೆಯಾಗಿದೆ. ಎರಡನೇ ಕೇಸ್ (ಪಿ-304) ಮೃತ ಮೊದಲ ಪಾಸಿಟಿವ್ ಕೇಸ್ (ಪಿ-166) ಆಪ್ತರಾಗಿದ್ದರು. ಈಗ ದೃಢಪಟ್ಟ ಮೂರನೇ ಕೇಸ್ ವ್ಯಕ್ತಿ (ಪಿ-370) ಎರಡನೇ ಕೇಸ್ (ಪಿ-304) ದ್ವಿತೀಯ ಸಂಪರ್ಕದಲ್ಲಿದ್ದರು. ಮೊದಲ ಪಾಸಿಟಿವ್ ಕೇಸ್ ಏ. 6ರಂದು 80ರ ವಯಸ್ಸಿನ ವೃದ್ಧೆಯಲ್ಲಿ ದೃಢಪಟ್ಟಿತ್ತು. ಆ ವೃದ್ಧೆ ಏ. 8ರಂದು ಮೃತರಾದರು. ಎರಡನೇ ಕೇಸ್ ಏ. 16ರಂದು ದೃಢಪಟ್ಟಿತ್ತು. ಏ.18ರಂದು ಮೂರನೇ ಕೇಸ್ ದೃಢಪಟ್ಟಿದೆ. ಕೇವಲ 12 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮೂರು ಕರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಗದಗ-ಬೆಟಗೇರಿ ನಗರದ ನಿವಾಸಿ 42 ವರ್ಷದ ಪುರುಷನಲ್ಲಿ (ಪಿ-370) ಕರೊನಾ ಸೋಂಕು ದೃಢಪಟ್ಟಿದ್ದು, ಇವರು ಪಿ 304 ಪ್ರಕರಣದ ದ್ವೀತಿಯ ಸಂಪರ್ಕದಲ್ಲಿದ್ದರು. ಇವರಿಗೆ ತಂದೆ-ತಾಯಿ ಹೆಂಡತಿ ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಎಲ್ಲರನ್ನು ಮುಂಜಾಗ್ರತಾ ಕ್ರಮವಾಗಿ ನಿಗಾದಲ್ಲಿರಿಸಲಾಗಿದೆ. ಅಲ್ಲದೆ, ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕೋವಿಡ್ 19 ನಿರ್ವಹಣೆ ನಿಯಮಗಳನ್ವಯ ಎಲ್ಲ ಮುನ್ನೆಚ್ಚರಿಕೆ ಕ್ರಮ ಜರುಗಿಸಲಾಗಿದೆ. ಪಿ 370 ಪುರುಷ ಇದ್ದ ಪ್ರದೇಶವನ್ನು ಈಗಾಗಲೇ ನಿಯಂತ್ರಿತ ಪ್ರದೇಶವನ್ನು ಘೊಷಿಸಿ ಸಾರ್ವಜನಿಕರು ಆ ಪ್ರದೇಶದಿಂದ ಹೊರಗೆ ಅಥವಾ ಒಳಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಎರಡನೇ ಪಾಸಿಟಿವ್ ಪ್ರಕರಣ ದೃಢವಾದ ನಂತರ ಜಿಲ್ಲಾಡಳಿತ ರಂಗನವಾಡಿ ಗಲ್ಲಿಯ ಸುಮಾರು 151 ಜನರ ಗಂಟಲ ಮಾದರಿಗಳನ್ನು ಪರೀಕ್ಷೆಗೆ ಕಳಿಸಿತ್ತು. ಇದರಲ್ಲಿ ಪ್ರಾಥಮಿಕ ಸಂಪರ್ಕ ಮತ್ತು ಎರಡನೇ ಹಂತದ ಸಂಪರ್ಕದ ವ್ಯಕ್ತಿಗಳಿದ್ದರು. ಹಲವರ ವರದಿ ನೆಗೆಟಿವ್ ಬಂದಿದ್ದು, ಇನ್ನು ಪಿ 304ರ ಸಂಬಂಧಿಕರು ಸೇರಿ ಅನೇಕ ಜನರ ವರದಿ ಬರಬೇಕಿದೆ.
ಡ್ರೋನ್ ಕ್ಯಾಮರಾ ಕಣ್ಗಾವಲು : ಶುಕ್ರವಾರ ರಂಗನವಾಡಿ ಗಲ್ಲಿಯ ಕುಟುಂಬವೊಂದು ಮನೆಯ ಎಲ್ಲ ಸಾಮಾನುಗಳನ್ನು ವಾಹನದಲ್ಲಿ ಹೇರಿಕೊಂಡು ನಗರದ ಪಂಚಾಕ್ಷರಿ ನಗರಕ್ಕೆ ವಾಸವಾಗಲು ಬಂದಿತ್ತು. ವಿಷಯ ತಿಳಿದ ಮೇಲೆ ಅವರನ್ನು ನಿಯಂತ್ರಿತ ಪ್ರದೇಶದ ಮನೆಗೆ ಕಳಿಸಲಾಯಿತು. ಹೀಗಾಗಿ ಮೂರನೇ ಪ್ರಕರಣ ಪತ್ತೆಯಾದ ನಂತರ ಜಿಲ್ಲಾಡಳಿತ ನಿಯಂತ್ರಿತ ಪ್ರದೇಶದಲ್ಲಿ ಬಿಗಿ ಪಹರೆ ನಿಯೋಜಿಸಿದೆ. ಅಲ್ಲದೇ ಡ್ರೋನ್ ಕ್ಯಾಮರಾ ಮೂಲಕ ನಿಯಂತ್ರಿತ ಪ್ರದೇಶದಲ್ಲಿ ಬಿಗಿ ಕಣ್ಗಾವಲು ಇರಿಸಲಾಗಿದೆ.
ಹಾಟ್ಸ್ಪಾಟ್ ಆದ ರಂಗನವಾಡಿ ಗಲ್ಲಿ!: ನಗರದ ರಂಗನವಾಡಿ ಗಲ್ಲಿಯಿಂದಲೇ ಮೂರನೇ ಸೋಂಕಿತ ಪತ್ತೆಯಾದ ನಂತರ ಜಿಲ್ಲಾಡಳಿತ ಮತ್ತಷ್ಟು ಚುರುಕಿನಿಂದ ಕೆಲಸ ಮಾಡತೊಡಗಿದೆ. ಶನಿವಾರ ಮಧಾಹ್ನ ರಾಜ್ಯ ಹೆಲ್ತ್ ಬುಲಿಟಿನ್ ಘೊಷಣೆಯಾದ ನಂತರ ಗದಗ ನಗರದ ಕಂಟೈನ್ಮೆಂಟ್ ಪ್ರದೇಶದಿಂದಲೇ ಮತ್ತೊಂದು ಕೇಸ್ ದೃಢವಾದ ನಂತರ ಜಿಲ್ಲಾಡಳಿತ ನಿಯಂತ್ರಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಜಿಪಂ ಸಿಇಒ ಡಾ. ಆನಂದ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಯೋಜನಾ ನಿರ್ದೇಶಕ ರುದ್ರೇಶ, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಸೇರಿ ಅನೇಕ ಅಧಿಕಾರಿಗಳು ನಿಯಂತ್ರಿತ ಪ್ರದೇಶ ರಂಗನವಾಡಿ ಗಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಯಂತ್ರಿತ ಪ್ರದೇಶದಲ್ಲಿ ಜನರು ಯಾವುದೇ ಕಾರಣಕ್ಕೂ ಹೊರಗೆ ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಸೂಚನೆ ನೀಡಿದರು.
ಬೈಕ್ ಸವಾರನಿಗೆ ಲಾಠಿ ರುಚಿ: ನಿಯಂತ್ರಿತ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿದ್ದ ಬೈಕ್ ಸವಾರನಿಗೆ ಪೊಲೀಸರು ಬಿಸಿಬಿಸಿ ಕಜ್ಜಾಯ ನೀಡಿ ಹೊರದಬ್ಬಿದರು. ಕಂಟೈನ್ಮೆಂಟ್ ಪ್ರದೇಶವನ್ನು ರೆಡ್ ಝೋನ್ ಎಂದು ಗುರುತಿಸಿ ಬಂದೋಬಸ್ತ್ ಮಾಡಲಾಗಿದೆ. ಆದರೂ ಒಳಗೆ ಹೇಗೆ ಬಂದೇ ಎಂದು ಪೊಲೀಸರು ಸವಾರಿನಿಗೆ ಗದರಿಸಿ ಬೆತ್ತದ ರುಚಿ ತೋರಿಸಿದರು. ಏಟು ತಿಂದ ಬೈಕ್ ಸವಾರ ಆಸಾಮಿ ಹಿಂದೆ ತಿರುಗಿ ನೋಡದೇ ನಿಯಂತ್ರಿತ ಪ್ರದೇಶದಿಂದ ಹೊರಹೋಗಿದ್ದು ಕಂಡುಬಂದಿತು.