ಕರೊನಾ ಹರಡದಂತೆ ನಿಗಾ ವಹಿಸಿ

1304klb20
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕರೊನಾ ಸೋಂಕಿಗೆ ನಗರದಲ್ಲಿ ಮೂವರು ಮೃತಪಟ್ಟಿದ್ದು, ವೈರಸ್ ಇನ್ನಷ್ಟು ಹರಡದಂತೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಯಾರೂ ನಿರ್ಲಕ್ಷ್ಯ ಮಾಡಬೇಡಿ. ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ಎಲ್ಲೆಡೆ ನಿರಂತರ ನಡೆಸಿ ಎಂದು ನಿರ್ದೇಶನ ನೀಡಿದರು.
ತೀವ್ರ ಉಸಿರಾಟ ತೊಂದರೆ ಹಾಗೂ ಕೋವಿಡ್-19 ಪ್ರಕರಣ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದ್ದರಿಂದ ಕೆಪಿಎಂಎ ಕಾಯ್ದೆಯಡಿ ನೋಂದಣಿ ಆಗಿರುವ ನಗರದ ಎಲ್ಲ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್, ಅಲೋಪಥಿ, ಯೂನಾನಿ, ಆಯುರ್ವೇದಿಕ್, ಹೋಮಿಯೋಪಥಿ ವೈದ್ಯರು ತಮ್ಮ ಬಳಿ ಕೋವಿಡ್-19 ಸೇರಿ ಇಂತಹ ಲಕ್ಷಣದ ರೋಗಿಗಳು ಕಂಡುಬಂದಲ್ಲಿ ತಕ್ಷಣವೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅಲ್ಲದೆ ಈ ಕುರಿತು ಪ್ರತಿದಿನ ವರದಿ ಪಡೆಯಬೇಕು ಎಂದು ಡಿಎಚ್ಒಗೆ ತಾಕೀತು ಮಾಡಿದರು.
ಮಗುವಿಗೆ ಸೋಂಕು ಕಂಡು ಬಂದಿರುವ ವಾಡಿಯಲ್ಲಿ ಕಂಟೇನ್ಮೆಂಟ್ ಝೋನ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಿಗಿರಿಗೆ ಸೂಚಿಸಿದ ಕಪಿಲ್ ಮೋಹನ್, ಅಗತ್ಯ ವಸ್ತುಗಳ ಸಾಗಣೆಗೆ ಯಾವುದೇ ಪಾಸ್ ಬೇಕಿಲ್ಲ. ಜಿಲ್ಲೆಯೊಳಗೆ, ಜಿಲ್ಲೆಯಿಂದ ಹಾದು ಹೋಗುವ ಮತ್ತು ಜಿಲ್ಲೆಗೆ ಆಗಮಿಸುವ ಅಗತ್ಯ ವಸ್ತುಗಳ ವಾಹನಗಳಿಗೆ ಪ್ರವೇಶಾವಕಾಶ ಮಾಡಿಕೊಡಬೇಕು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಮ್ಸ್ ಆಸ್ಪತ್ರೆ ಪಕ್ಕದ ಟ್ರಾಮಾ ಸೆಂಟರ್ ಸಹ ಸಜ್ಜುಗೊಳಿಸಲಾಗಿದೆ ಎಂದರು.
ಜಿಪಂ ಸಿಇಒ ಡಾ.ಪಿ.ರಾಜಾ ಮಾತನಾಡಿ, ಮುಂಜಾಗ್ರತೆಯಾಗಿ ಸೂಪರ್ ವಿಷನ್ ಐಸೋಲೇಷನ್ ವಾರ್ಡ್​ ಸ್ಥಾಪಿಸಲು 22 ಸ್ಥಳಗಳನ್ನು ಗುರುತಿಸಲಾಗಿದೆ. ಗೃಹ ಬಂಧನಕ್ಕಾಗಿ 34 ಹಾಸಿಗೆಯ ಸರ್ಕಾರಿ ಯೂನಾನಿ ಆಸ್ಪತ್ರೆ ಮತ್ತು ಪಾಲಿ ಹೌಸ್ ಕಟ್ಟಡ ಬಳಸಲಾಗುತ್ತಿದೆ. ಫೀವರ್ ಕ್ಲಿನಿಕ್ಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ನೇಮಕಾತಿ ವಿಭಾಗದ ಎಡಿಜಿಪಿ ಅಮೃತ ಪಾಲ್, ಐಜಿಪಿ ಮನೀಷ್ ಖರ್ಬಿಕರ್, ನಗರ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ್, ಎಸ್ಪಿ ಯಡಾ ಮಾರ್ಟಿನ್​ ಮಾರ್ಬನ್ಯಾಂಗ್, ಡಿಸಿಪಿ ಕಿಶೋರಬಾಬು, ಎಡಿಸಿ ರಾಚಪ್ಪ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಕೆಕೆಆರ್ಡಿಬಿ ಜಂಟಿ ಕಾರ್ಯದರ್ಶಿ ಪ್ರವೀಣಪ್ರಿಯಾ ಡೇವಿಡ್, ಜಿಮ್ಸ್ ನಿರ್ದೇಶಕ ಡಾ.ಕವಿತಾ ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ.ಶಫಿಯುದ್ದೀನ್, ಇಎಸ್ಐಸಿ ಡೀನ್ ಡಾ.ಎ.ಎಲ್. ನಾಗರಾಜ್, ಕೋವಿಡ್-19 ನೋಡಲ್ ಅಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ಜೆಸ್ಕಾಂ ಸಹಾಯಕ ವ್ಯವಸ್ಥಾಪಕಿ ಪ್ರಮೀಳಾ ಪೆರ್ಲ ಇತರರಿದ್ದರು.

ಮುಸ್ಲಿಂ ಮುಖಂಡರ ಜತೆ ಸಭೆ
ಲಾಕ್ಡೌನ್ ಪರಿಪಾಲನೆ ಎಲ್ಲರ ಕರ್ತವ್ಯವಾಗಿದ್ದು, ಸರ್ಕಾರದ ಸೂಚನೆ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಟೌನ್ ಹಾಲ್ನಲ್ಲಿ ಮುಸ್ಲಿಂ ಮುಖಂಡರ ಜತೆ ಸೋಮವಾರ ಸಂಜೆ ಸಭೆ ನಡೆಸಿದ ಅವರು, ಕರೊನಾ ನಿಯಂತ್ರಣಕ್ಕೆ ಎಲ್ಲರೂ ಸಹಕಾರ ನೀಡಬೇಕು. ಜಾತಿ ಮತ ತಾರತಮ್ಯ ಮರೆತು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಕೋರಿದರು. ಲಾಕ್ಡೌನ್ನಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ಬಡಜನರಿಗೆ ಆಹಾರ ಪದಾರ್ಥ ತಲುಪಿಸುವ ವ್ಯವಸ್ಥೆ ಮಾಡಬೇಕು. ಕಾರ್ಮಿ ಕರು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದು, ನೆರವಾಗಲು ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕು ಎಂದು ಮುಸ್ಲಿಂ ಸಮಾಜದವರು ಮನವಿ ಮಾಡಿದರು. ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಕನೀಜ್ ಫಾತಿಮಾ, ಡಿಸಿ ಬಿ.ಶರತ್, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net