ಕರೊನಾ ಹತೋಟಿಗೆ ಸರ್ಕಾರ ಕ್ರಮ, ಕೇಂದ್ರ ಸಚಿವ ಸದಾನಂದಗೌಡ ಅಭಯ ಜಿಗಣಿಯಲ್ಲಿ ರೆಮ್‌ಡಿಸಿವಿರ್ ಪ್ಲಾಂಟ್ ವೀಕ್ಷಣೆ

23ank news and photos 04
Published on

ಆನೇಕಲ್: ಕರೊನಾ ಹತೋಟಿಗೆ ತರಲು ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದರು.

ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ಮೈಲಾನ್ ಔಷಧ ಕಂಪನಿಗೆ ಶುಕ್ರವಾರ ಭೇಟಿ ನೀಡಿ ರೆಮ್‌ಡಿಸಿವಿರ್ ಪ್ಲಾಂಟ್ ವೀಕ್ಷಣೆ ಹಾಗೂ ಕಂಪೆನಿ ಆಡಳಿತ ಮಂಡಳಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆಮ್ಲಜನಕ ಉತ್ಪಾದಿಸುವ ಕಾರ್ಖಾನೆಗಳು ನಿಗದಿತ ಆಸ್ಪತ್ರೆಗೆ ಮಾತ್ರ ಪೂರೈಸಬೇಕು, ರೆಮ್‌ಡಿಸಿವಿರ್ ಉತ್ಪಾದನೆಯ ಶೇ.70 ಔಷಧವನ್ನು ಕೇಂದ್ರ ಸರ್ಕಾರ ಸೂಚಿಸುವ ಆಸ್ಪತ್ರೆಗಳಿಗೆ ಕಳುಹಿಸಿಕೊಡಬೇಕೆಂದು ಈಗಾಗಲೇ ಪ್ರಧಾನಮಂತ್ರಿಗಳು ನಿದರ್ಶನ ನೀಡಿದ್ದಾರೆ ಎಂದರು.

ಕೋವಿಡ್ ಬಳಸುವ ರೆಮ್‌ಡಿಸಿವಿರ್ ಔಷಧವನ್ನು ತಯಾರಿಸುತ್ತಿರುವ ಮೈಲಾನ್ ಕಂಪನಿಗೆ ತಯಾರಿಕಾ ಪ್ರಮಾಣ ಹೆಚ್ಚಳ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಂದಿರುವಂತಹ ಆಮ್ಲಜನಕ ಸಾಕಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರು ತಿಳಿಸಿದ್ದು, ಈ ಬಗ್ಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ 50,000 ವಿಹಾಲ್ಸ್ ಆಮ್ಲಜನಕವನ್ನು ಕರ್ನಾಟಕಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಔಷಧ ಪ್ರಮಾಣ ಹೆಚ್ಚಳದ ಜತೆಗೆ ಅವಶ್ಯಕತೆ ಇರುವ ರಾಜ್ಯಗಳಿಗೆ ರೆಮ್‌ಡಿಸಿವಿರ್ ಔಷಧ ಕಳುಹಿಸಿಕೊಡಲು ಸರ್ಕಾರದ ಜತೆ ಕೈಜೋಡಿಸಲು ಮನವಿ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಕರೊನಾ ಹೆಚ್ಚಾಗುತ್ತಿದ್ದು ಜನರ ಹಿತ ಕಾಯುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಔಷಧವನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಡ್ರಗ್ ಕಂಟ್ರೋಲರ್ ಹಾಗೂ ಪೊಲೀಸರಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ಚರ್ಚೆ ಬಳಿಕ ಸಚಿವ ಸದಾನಂದ ಗೌಡ ಹಾಗೂ ಸಂಸದ ಪಿ.ಸಿ. ಮೋಹನ್, ಶಾಸಕ ಎಂ .ಕೃಷ್ಣಪ್ಪ ಔಷಧ ತಯಾರಿಕಾ ಘಟ ವೀಕ್ಷಣೆ ಮಾಡಿದರು.

ಬಿಜೆಪಿ ಮುಖಂಡ ನಾರಾಯಣಸ್ವಾಮಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಸದಸ್ಯ ವೆಂಕಟೇಶ್ ಗೌಡ, ಬಿಜೆಪಿ ದಕ್ಷಿಣ ತಾಲೂಕು ಅದ್ಯಕ್ಷ ರಾಜಶೇಖರ ರೆಡ್ಡಿ ಮತ್ತಿತರರು ಇದ್ದರು.

ಆನೇಕಲ್‌ನ ಅತ್ತಿಬೆಲೆಯ ಆಕ್ಸರ್ಡ್ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರು ಸಾವನ್ನಪ್ಪುತ್ತಿರುವ ದೂರು ಬಂದಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಶಾಸಕ ಬಿ.ಶಿವಣ್ಣ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಎಂ.ಕೃಷ್ಣಪ್ಪ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net