ಕರೊನಾ ಸೋಲಿಸಿ ಭಾರತ ಗೆಲ್ಲಿಸೋಣ

21CBP1a (1)
Published on

ಚಿಕ್ಕಬಳ್ಳಾಪುರ : ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆಯುವ ಮೂಲಕ ಕರೊನಾ ಸೋಲಿಸಿ ಭಾರತ ಗೆಲ್ಲಿಸುವ ಹೋರಾಟಕ್ಕೆ ಜತೆಯಾಗಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ತಾಲೂಕಿನ ಪೆರೇಸಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರೇತರ ಸಂಸ್ಥೆಯಾದ ಯುನೈಟೆಡ್ ವೇ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಲಸಿಕಾ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದ ಮೇರೆಗೆ ದೇಶವ್ಯಾಪಿ ಅಭಿಯಾನ ನಡೆಸಲಾಗುತ್ತಿದೆ, ರಾಜ್ಯದಲ್ಲಿ ಸೋಮವಾರ ಒಂದೇ ದಿನ 5 ರಿಂದ 8 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾದ್ಯಂತ ಒಂದೇ ದಿನ 30-35 ಸಾವಿರ ಮಂದಿಗೆ ಲಸಿಕೆ ಹಾಕುತ್ತಿರುವುದು ದೊಡ್ಡ ಸಾಧನೆಯೇ ಸರಿ. ಇದಕ್ಕೆ ಯುನೈಟೆಡ್ ವೇ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸುಧಾಕರ್, ಈಗಾಗಲೇ ಜಿಲ್ಲೆಯ 1,000 ಮಂದಿಗೆ ಉಚಿತವಾಗಿ ಲಸಿಕಾಕರಣ ಮಾಡಲಾಗಿದೆ. ಸ್ಪರ್ಶ್ ಆಸ್ಪತ್ರೆ ಸಹಯೋಗದಲ್ಲಿ 1,500 ಜನಕ್ಕೆ ಲಸಿಕೆ ಹಾಕಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ. ಸಾಮಾನ್ಯವಾಗಿ ಲಸಿಕೆಗಳನ್ನು ಖರೀದಿಸಿ ಜನತೆಗೆ ನೀಡುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ, ಆದರೆ, ಪ್ರಧಾನಿ ಮೋದಿ ಮೊಟ್ಟ ಮೊದಲ ಬಾರಿಗೆ ರಾಜ್ಯಗಳಿಗೂ ಉಚಿತವಾಗಿ ಲಸಿಕೆ ತಲುಪಿಸುತ್ತಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರಡ್ಡಿ ಬಾಬು, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ತಾಲೂಕು ವೈದ್ಯಾಧಿಕಾರಿ ಡಾ.ಮಂಜುಳಾ, ಪೌರಾಯುಕ್ತ ಡಿ.ಲೋಹಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net