

ಹಿರೇಬಾಗೇವಾಡಿ: ಕರೊನಾ ಮಹಾಮಾರಿ ಎಲ್ಲೆಡೆ ರಣಕೇಕೆ ಹಾಕುತ್ತಿದ್ದು, ಜನರು ಜಾಗರೂಕರಾಗಿರಬೇಕು ಎಂದು ಕೇದಾರ ಪೀಠದ ಶಾಖಾ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಮೀಪದ ಮುತ್ನಾಳ ಕೇದಾರ ಪೀಠದ ಶಾಖಾ ಹಿರೇಮಠದಲ್ಲಿ ಗುರುವಾರ ಏರ್ಪಪಡಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದಕ್ಕೂ ಸರ್ಕಾರದ ಕಡೆಗೆ ನೋಡದೆ, ‘ನಮ್ಮ ಆರೋಗ್ಯ-ನಮ್ಮ ಕೈಯಲ್ಲಿ’ ಎಂಬ ಸೂತ್ರ ಪಾಲಿಸಬೇಕು ಎಂದರು.
ಹೊಸ ಪದ್ಧತಿ ಅನುಸರಿಸಿ: ಪ್ರಸ್ತುತ ಸನ್ನಿವೇಶದಲ್ಲಿ ನಂಬಿಕೆ ಹಾಗೂ ಮೂಢನಂಬಿಕೆಗಳ ತಾಕಲಾಟ ನಡೆದಿದ್ದು, ಅದು ಒಳ್ಳೆಯ ಬೆಳವಣಿ ಅಲ್ಲ. ಆಯುರ್ವೇದ ಹಾಗೂ ಪಾರಂಪರಿಕ ಔಷಧ ಪದ್ಧತಿಗಳ ಕಾರ್ಯ ಕ್ಷಮತೆಗಳನ್ನು ವೈಜ್ಞಾನಿಕ ಮಾನದಂಡಗಳಿಂದ ಅಳೆಯಬೇಕು. ಒಂದು ವೇಳೆ ಅದು ಬೇಡವಾಗಿದ್ದರೆ ಹೊಸ ಚಿಕಿತ್ಸಾ ಪದ್ಧತಿ ಅನುಸರಿಸಬೇಕು. ಸದ್ಯ ಕರೊನಾದ ಮೇಲೆ ನಡೆಯುತ್ತಿರುವ ಎಲ್ಲ ಕ್ರಮಗಳೂ ಪ್ರಯೋಗವೇ ಆಗಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಾಣಬೇಕಿದೆ ಎಂದರು. ಯುವ ಮುಖಂಡ ಚೇತನ ಅಂಗಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕರೊನಾ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು. ಬಾಪು ನಾವಲಗಟ್ಟಿ, ಬಿ.ಎಸ್.ಗಾಣಗಿ, ಮಾಯಪ್ಪ ಶಿಂಗಾಡಿ, ಗ್ರಾಪಂ ಸದಸ್ಯ ಶ್ರೀಕಾಂತ ಮಾಧುಭರಮಣ್ಣವರ, ಮಂಜುನಾಥ ವಸ್ತ್ರದ ಮಾತನಾಡಿದರು. ಅನ್ವರ್ ದೇವಡಿ, ಉದಯ ಹುಲಮನಿ, ಮಾಣಿಕ ಅಮಟೂರ, ಸಂಜಯ ದೇಸಾಯಿ, ಸತ್ಪಾಲ ಯಡಾಲ, ನಿಂಗಪ್ಪ ಕುಡಚಿ, ಶಂಕರ ಹಿತ್ತಿನಮನಿ, ಸಿದ್ಧನಗೌಡ ಹುಬ್ಬಳ್ಳಿ, ಸುಜನ್ ಹಿರೇಮಠ ಇತರರು ಉಪಸ್ಥಿತರಿದ್ದರು.