ಕರೊನಾ ಸೋಂಕು ಪರೀಕ್ಷಾ ಕೇಂದ್ರಕ್ಕೆ ಚಾಲನೆ

16CBP3
Published on

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಕರೊನಾ ಸೋಂಕು ಪರೀಕ್ಷಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಶನಿವಾರ ಉದ್ಘಾಟಿಸಿದರು.

24 ಸೋಂಕು ಪ್ರಕರಣಗಳ ಪತ್ತೆಯಾದ ಜಿಲ್ಲೆಯಲ್ಲಿ ಕರೊನಾ ಪರೀಕ್ಷಾ ಕೇಂದ್ರ ಪ್ರಾರಂಭಿಸಬೇಕೆಂಬ ಒತ್ತಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಪ್ರತಿನಿಧಿಸುವ ಭಾಗದಲ್ಲಿಯೇ ಪ್ರಯೋಗಾಲಯವಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿತ್ತು, ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಹೊಸ ಜಿಲ್ಲಾಸ್ಪತ್ರೆಯಲ್ಲಿ ಸೋಂಕು ಪರೀಕ್ಷೆಯ ಎರಡು ಯಂತ್ರಗಳ ಕಾರ್ಯಾರಂಭಕ್ಕೆ ಚಾಲನೆ ನೀಡಲಾಯಿತು.

ಜಿಲ್ಲೆಯಲ್ಲಿ ಕರೊನಾ ಪರೀಕ್ಷಾ ಕೇಂದ್ರದ ಸ್ಥಾಪನೆಯಿಂದ ಸೋಂಕಿನ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ತ್ವರಿತವಾಗಿ ಸೋಂಕು ಪತ್ತೆ ಹಚ್ಚಿ, ಚಿಕಿತ್ಸೆ ನೀಡಬಹುದಾಗಿದೆ ಎಂದು ಸಚಿವ ಡಾ.ಕೆಸುಧಾಕರ್ ತಿಳಿಸಿದರು.

ರಾಜ್ಯ ಸರ್ಕಾರವು 4ಟಿ (ಟ್ರ್ಯಾಕ್, ಟ್ರೇಸ್, ಟೆಸ್ಟ್ ಮತ್ತು ಟ್ರೀಟ್) ಸಿದ್ಧಾಂತವನ್ನು ಅನುಸರಿಸುತ್ತಿದ್ದು ಇದರಿಂದ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಗಿದೆ. ಸೋಂಕಿನಲ್ಲಿ 2 ಸ್ಥಾನಲ್ಲಿದ್ದ ಕರ್ನಾಟಕ ಇಂದು 13 ನೇ ಸ್ಥಾನದಲ್ಲಿದೆ. ಮೇ ಅಂತ್ಯಕ್ಕೆ 60 ಪ್ರಯೋಗಾಲಯವನ್ನು ಸ್ಥಾಪಿಸಿ, ಪ್ರತಿದಿನ 10 ಸಾವಿರಕ್ಕೂ ಮಾದರಿಗಳನ್ನು ಪರೀಕ್ಷಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಯಲ್ಲಾ ರಮೇಶ್ ಬಾಬು ಇತರರಿದ್ದರು.

ಪ್ರಯೋಗಾಲಯಕ್ಕೆ ಸಿದ್ಧತೆ: ಜಿಲ್ಲಾಸ್ಪತ್ರೆಯ ಹಳೇ ಕಟ್ಟಡದಲ್ಲಿರುವ ಮೂರು ಶೆಡ್‌ಗಳನ್ನು ನವೀಕರಣಗೊಳಿಸಿ, ಆರ್‌ಟಿಪಿಸಿಆರ್ (ರ‌್ಯಾಪಿಡ್ ಟೆಸ್ಟ್ ಪಾಲಿಮರೈಸ್ಡ್ ಚೈನ್ ರಿಯಾಕ್ಷನ್) ಪ್ರಯೋಗಾಲಯ ಸ್ಥಾಪನೆಗೆ ಸಿದ್ಧತೆ ನಡೆದಿದೆ, ಇದರ ಸಿವಿಲ್ ಮತ್ತು ತಾಂತ್ರಿಕ ಕಾಮಗಾರಿಗಳು 20 ದಿನಗೊಳಗೆ ಮುಗಿಯುವ ನಿರೀಕ್ಷೆಯಿದ್ದು ಒಂದು ತಿಂಗಳೊಳಗೆ ಪ್ರಯೋಗಾಲಯದ ಸೇವೆ ಈ ಭಾಗದ ಜನರಿಗೆ ಸಿಗಲಿದೆ ಎನ್ನಲಾಗಿದೆ, ಈಗಾಗಲೇ 80 ಲಕ್ಷ ರೂ.ಮೌಲ್ಯದ ಯಂತ್ರಗಳ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ. ಇದೆಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಬಹುವಿಧ ಮಾದರಿಗಳನ್ನು ಇಲ್ಲಿಯೇ ಪರೀಕ್ಷೆ ಮಾಡಬಹುದಾಗಿದ್ದು ಪರೀಕ್ಷೆಗಾಗಿ ಬೆಂಗಳೂರಿನ ಕಮಾಂಡೊ ಆಸ್ಪತ್ರೆ, ಬೆಂಗಳೂರು ವೈದ್ಯಕೀಯ ಕಾಲೇಜು ಸೇರಿ ವಿವಿಧೆಡೆ ಮಾದರಿಗಳನ್ನು ಕಳುಹಿಸುವುದು ತಪ್ಪುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಸಮುದಾಯಕ್ಕೆ ಸೋಂಕು ಹರಡದಂತೆ ಕ್ರಮ: ಹೊರಭಾಗದಿಂದ ಬರುತ್ತಿರುವವರಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬುದು ಸತ್ಯ. ಆದರೆ, ನಮ್ಮವರನ್ನು ರಕ್ಷಿಸುವುದು ಸರ್ಕಾರದ ಧರ್ಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶ-ವಿದೇಶಗಳಿಂದ ಆಗಮಿಸುತ್ತಿರುವವರಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿದೆ. ಆದ್ದರಿಂದ ರಾಜ್ಯಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿರಿಸಿ ನಿಗಾವಹಿಸಲಾಗುತ್ತಿದೆ. ಸಮುದಾಯಕ್ಕೆ ಸೋಂಕು ಹರಡದಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಮೇ 17ಕ್ಕೆ ಮೂರನೇ ಹಂತದ ಲಾಕ್‌ಡೌನ್ ಮುಗಿದು, 4ನೇ ಹಂತ ಘೋಷಣೆಯಾಗಲಿದೆ. ಆದರೆ, ಲಾಕ್‌ಡೌನ್ ಮೊದಲಿನಂತೆ ಕಠಿಣವಾಗಿರುವುದಿಲ್ಲ. ಭಾರತವಲ್ಲದೆ ಹಲವು ರಾಷ್ಟ್ರಗಳೂ ನಷ್ಟ ಅನುಭವಿಸಿವೆ. ಅಭಿವೃದ್ಧಿಯಲ್ಲಿ 6 ತಿಂಗಳು ಹಿಂದಕ್ಕೆ ಹೋಗಿವೆ. ಜೀವದ ಜತೆಗೆ ಜೀವನ ನಡೆಸುವುದೂ ಮುಖ್ಯ. ಆದ್ದರಿಂದ ಲಾಕ್‌ಡೌನ್ ಸಡಿಲಗೊಳಿಸಲಾಗುತ್ತಿದೆ. ಕರೊನಾ ಸೋಂಕು ದೀರ್ಘಕಾಲ ಕಾಡುವುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ, ಸೋಂಕಿನ ವಿರುದ್ಧ ಹೋರಾಡುತ್ತಲೇ ಬದುಕಬೇಕಾಗಿದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net