

ಅಥಣಿ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸುಮಾರು 50 ಕರೊನಾ ಸೋಂಕಿತರಿಗಾಗಿ ಆರೈಕೆ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ನೂತನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮೂರು ಪಾಳಿಯಲ್ಲಿ ವೈದ್ಯರು, ನರ್ಸ್, ವಾರ್ಡನ್ ಕಾರ್ಯನಿರ್ವಹಿಸುತ್ತಿರುತ್ತಾರೆ. ವೈದ್ಯಕೀಯ ಸಲಕರಣೆ, ಔಷಧೋಪಾಚಾರ ಹಾಗೂ 50 ಆಕ್ಸಿಜನ್ ಸಾಂದ್ರಕ ಮಷಿನ್ ಅಳವಡಿಸಲಾಗಿದೆ ಎಂದರು. ಈಗಾಗಲೇ ತಾಲೂಕಿನಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಹೆಚ್ಚಿರುವುದರಿಂದ ಬೆಡ್ ಭರ್ತಿಯಾಗಿವೆ. ಆ ದೃಷ್ಟಿಯಿಂದ ಇಲ್ಲಿ ಮೊದಲ ಹಂತದಲ್ಲಿ 50 ಜನರಿಗೆ ಮತ್ತೆ ಕೃಷ್ಣಾ ಸಕ್ಕರೆ ಕಾರ್ಖಾನೆ ರೈತ ಭವನದಲ್ಲಿ ಸಹ ವಿಶೇಷ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. ಪ್ರಥಮ ಚಿಕಿತ್ಸೆ ನೀಡುವ
ಉದ್ದೇಶದಿಂದ ಈ ವಸತಿ ಶಾಲೆಯಲ್ಲಿ ರೋಗಿಗಳ ಆರೈಕೆ ಕೇಂದ್ರ ತೆರೆಯಲಾಗಿದೆ . ಆಕ್ಸಿಜನ್ ಕೊರತೆ ಆಗದಂತೆ ಸಿಲಿಂಡರ್ ಅಳವಡಿಸಲಾಗಿದೆ ಎಂದರು. ಜನರು ಅನಗತ್ಯ ಹೆದರಬಾರದು. ನಿಮ್ಮ ಜತೆಗೆ ನಾವಿದ್ದೇವೆ ಎಂದರು.
ಭಾವುಕರಾದ ಸವದಿ: ನಾವು ಸಾರ್ವಜನಿಕ ಜೀವನದಲ್ಲಿರುವವರು ಸಂಕಷ್ಟಗಳಿಗೆ ಹೆದರಬಾರದು. ಸಮಾಜ ಚೆನ್ನಾಗಿರಬೇಕು. ಹಾಗಾದಾಗ ನಮ್ಮ ಸೇವೆ ಸಾರ್ಥಕ. ಮೊನ್ನೆ ನನ್ನ ಹಿರಿಯ ಸಹೋದರನ ಪುತ್ರ ನಿಧನವಾದರೆ, ಇಂದು ನನ್ನ ಹಿರಿಯ ಸಹೋದರ ನಿಧನರಾದರು. ಅವರ ಅಂತ್ಯಕ್ರಿಯೆ ಮುಗಿಸಿ ಕ್ಷೇತ್ರ ವೀಕ್ಷಣೆಗೆ ಬಂದಿರುವುದಾಗಿ ಸವದಿ ಭಾವುಕರಾದರು.
ಅರವಿಂದರಾವ ದೇಶಪಾಂಡೆ, ತಹಸೀಲ್ದಾರ್ ದುಂಡಪ್ಪ ಕೋಮಾರ, ವೈದ್ಯಾಧಿಕಾರಿ ಬಸಗೌಡ ಕಾಗೆ, ಖಾಸಗಿ ವೈದ್ಯರಾದ ಡಾ.ಅವಿನಾಶ ನಾಯಕ, ಡಾ.ರವಿ ಪಾಂಗಿ, ಗಣ್ಯರಾದ ಪ್ರವೀಣ ಭಾಟೆ, ಚಿದಾನಂದ ಸವದಿ, ಭರತ ಸೋಮಯ್ಯ, ಆನಂದ ಟೊನಪಿ, ರಾಜು ಗುಡೋಡಗಿ, ಮುರುಗೇಶ ಬಾನಿ, ಡಿವೈಎಸ್ಪಿ ಎಸ್.ವಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ ಇತರರು ಇದ್ದರು.