ಕರೊನಾ ಸೋಂಕಿತ 278 ಗರ್ಭಿಣಿಯರಿಗೆ ಹೆರಿಗೆ

10 (1)
Published on

ಮೈಸೂರು: ರಾಜ್ಯದ ಮೊದಲ ಕೋವಿಡ್ ಹೆರಿಗೆ ಆಸ್ಪತ್ರೆ ಎಂಬ ಹಿರಿಮೆ ಹೊಂದಿರುವ ನಗರದ ಶ್ರೀಲಕ್ಷ್ಮೀದೇವಮ್ಮ ಶಂಕರಶೆಟ್ಟಿ ಹೆರಿಗೆ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತ 278 ಗರ್ಭಿಣಿಯರಿಗೆ ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆ ಮಾಡಿಸಿದೆ.
ವಿ.ವಿ.ಪುರಂನಲ್ಲಿರುವ ಶ್ರೀಲಕ್ಷ್ಮೀದೇವಮ್ಮ ಶಂಕರಶೆಟ್ಟಿ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಹೆರಿಗೆ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿ, ಸೋಂಕು ತಗುಲಿದ ಗರ್ಭಿಣಿಯರ ಚಿಕಿತ್ಸೆ ಮತ್ತು ವಿಶೇಷ ಆರೈಕೆ ಮಾಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿರುವುದು ಪ್ರಯೋಜನಕ್ಕೆ ಬಂದಿದೆ.
ಇದನ್ನು 2020ರ ಏಪ್ರಿಲ್ 9ರಂದು ಕೋವಿಡ್ ಹೆರಿಗೆ ಆಸ್ಪತ್ರೆಯಾಗಿ ಕಾರ್ಯರೂಪಕ್ಕೆ ತರಲಾಗಿತ್ತು. ಆ ವೇಳೆ ಲಾಕ್‌ಡೌನ್ ನಿಯಮ ಸಡಿಲಿಕೆಗೊಳಿಸಿದ ಪರಿಣಾಮ ಮಹಾರಾಷ್ಟ್ರ ಸೇರಿ ಬೇರೆ ಬೇರೆ ರಾಜ್ಯದಿಂದ ಹಲವು ಜನರು ಜಿಲ್ಲೆಗೆ ವಾಪಸ್ ಆಗಿದ್ದರು. ಅವರಲ್ಲಿ ಕೆಲವರು ಗರ್ಭಿಣಿಯರೂ ಸೇರಿದ್ದರು. ಜೂನ್ 20ರಂದು ಈ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಯ ಮೊದಲ ಹೆರಿಗೆ ಪ್ರಕರಣ ದಾಖಲಾಗಿತ್ತು. 2021ರ ಜ.7ರಂದು ಕೊನೆಯ ಪ್ರಕರಣ ವರದಿಯಾಗಿದೆ. ಈವರೆಗೆ ಕೋವಿಡ್ ಹೆರಿಗೆ ಆಸ್ಪತ್ರೆಯಲ್ಲಿ 278 ಹೆರಿಗೆ ನಡೆದಿದೆ. ಅದರಲ್ಲಿ 127 ಸಹಜ ಹೆರಿಗೆ, 151 ಸಿಜೇರಿಯನ್ ಹೆರಿಗೆ ಮಾಡಿಸಲಾಗಿದೆ. 147 ಗಂಡು ಮಗು, 131 ಹೆಣ್ಣು ಮಗುವಿನ ಜನನ ಇಲ್ಲಿ ಆಗಿದೆ.
ಹೊರ ರಾಜ್ಯ, ಜಿಲ್ಲೆಗೆ ಹೋಲಿಸಿಕೊಂಡರೆ ಜಿಲ್ಲೆಯಲ್ಲಿ ಕರೊನಾ ಸೋಂಕಿತ ಗರ್ಭಿಣಿಯರಿಗೆ ಸಹಜ ಹೆರಿಗೆ ಹೆಚ್ಚು. ಅಲ್ಲದೆ ಹೊರ ರಾಜ್ಯ, ಜಿಲ್ಲೆಗಳಲ್ಲಿ ಸೋಂಕಿತ ಗರ್ಭಿಣಿಯರು ಹಾಗೂ ಜನನವಾದ ನವಜಾತ ಶಿಶುಗಳು ಸೋಂಕಿಗೆ ಬಲಿಯಾಗಿರುವ ಪ್ರಕರಣಗಳು ದಾಖಲಾಗಿವೆ. ಈ ರೀತಿಯ ಪ್ರಕರಣ ದಾಖಲಾಗಿಲ್ಲ.
ಈ ಆಸ್ಪತ್ರೆಯಲ್ಲಿ ನಾಲ್ವರು ವೈದ್ಯರು ಹಾಗೂ ಇತರ 26 ಸಿಬ್ಬಂದಿ ಹಗಲಿರುಳು ಸೇವೆ ಸಲ್ಲಿಸಿ ಸೋಂಕಿತ ಗರ್ಭಿಣಿಯರು, ಜನನವಾದ ಶಿಶುಗಳ ಆರೋಗ್ಯ ಕಾಪಾಡುವಲ್ಲಿ ಅವಿರತ ಸೇವೆ ಸಲ್ಲಿಸಿದ್ದು, ಪಿಪಿಇ ಕಿಟ್ ಧರಿಸಿಯೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಸಿಬ್ಬಂದಿ ಹೆರಿಗೆಯ ಬಳಿಕ ನವಜಾತ ಶಿಶುವಿಗೆ ತಾಯಿಯಿಂದ ಕರೊನಾ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ನವಜಾತ ಶಿಶುಗಳಿಗೆ ಸೋಂಕು ತಗುಲಿರಲಿಲ್ಲ.

ಹಳೇ ಸ್ಥಿತಿಗೆ ಮರಳಿದ ಆಸ್ಪತ್ರೆ
ಕೋವಿಡ್ ಹೆರಿಗೆ ಆಸ್ಪತ್ರೆಯಾಗಿ ಕಾಯ್ದಿರಿಸಿದ್ದ ಲಕ್ಷ್ಮೀದೇವಮ್ಮ ಶಂಕರಶೆಟ್ಟಿ ಆಸ್ಪತ್ರೆಯನ್ನು ಫೆ.1ರಿಂದ ಸಾಮಾನ್ಯ ಹೆರಿಗೆ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ತಿಳಿಸಿದ್ದಾರೆ
ಕರೊನಾ ಸೋಂಕಿತ ಗರ್ಭಿಣಿಯರು ಬಂದರೆ ಅವರನ್ನು ಕೋವಿಡ್ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಈಗಾಗಲೇ ಈ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗಿದ್ದು, ರೋಗಿಗಳು ಆತಂಕವಿಲ್ಲದೆ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net