ಕರೊನಾ ಸೋಂಕು ತಡೆಗೆ ಕ್ರಮಗಳು

h23-Vidyanagar 2
Published on

ಧಾರವಾಡ: ಕರೊನಾ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಸಾರ್ವಜನಿಕರು ಕೆಲ ಮಹತ್ವದ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಡಳಿತ ಕೋರಿದೆ.

ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜನರೊಂದಿಗೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಆಗಾಗ ಕೈಗಳನ್ನು ಸೋಪ್ ಮತ್ತು ನೀರನ್ನು ಬಳಸಿ ತೊಳೆದುಕೊಳ್ಳುವುದು ಅಥವಾ ನೀರು ಸಿಗದಿದ್ದರೆ ಶೇ. 60ಕ್ಕಿಂತ ಹೆಚ್ಚು ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛಗೊಳಿಸಬೇಕು.

ಕೆಮ್ಮುವಾಗ ಮತ್ತು ಸೀನುವಾಗ ಮೂಗು ಮತ್ತು ಬಾಯನ್ನು ಕರವಸ್ತ್ರದಿಂದ ಅಥವಾ ಟಿಶ್ಯೂವಿನಿಂದ ಮುಚ್ಚಿಕೊಳ್ಳಬೇಕು. ಟಿಶ್ಯೂ ಬಳಸಿದ ನಂತರ ಕೂಡಲೆ ಮುಚ್ಚಿದ ತ್ಯಾಜ್ಯ ತೊಟ್ಟಿಯೊಳಗೆ ಎಸೆಯಬೇಕು. ಬೇರೆ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವಾಗ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಜ್ವರ, ಕೆಮ್ಮು ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರವಿರಬೇಕು. ದೇಹದ ತಾಪಮಾನ ಹಾಗೂ ಉಸಿರಾಟದ ಲಕ್ಷಣಗಳನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳಬೇಕು. ಉಸಿರಾಟ ತೊಂದರೆಯಿದ್ದಲ್ಲಿ ಹಾಗೂ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಬಳಿ ಹೋಗುವಾಗ ಮಾಸ್ಕನ್ನು ಧರಿಸಬೇಕು ಅಥವಾ ಬಾಯಿ ಮತ್ತು ಮೂಗನ್ನು ಬಟ್ಟೆಯಿಂದ ಮುಚ್ಚಿಕೊಂಡು ಹೋಗಬೇಕು.

ಜ್ವರ, ನಿಮೋನಿಯಾದಂತಹ ರೋಗ ಲಕ್ಷಣಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 104 ಹಾಗೂ ಕರ್ನಾಟಕ ಸರ್ಕಾರ ಸಚಿವಾಲಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 080- 46848600 ಮತ್ತು 080- 66692000ಗೆ ಅಥವಾ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ 24ಗಿ7 ಸಹಾಯವಾಣಿ ಸಂಖ್ಯೆ 011 - 23978046ಗೆ ಅಥವಾ ಧಾರವಾಡ ಜಿಲ್ಲೆಯ ಸಹಾಯವಾಣಿ 1077ಗೆ ಕರೆ ಮಾಡಬೇಕು.

ಇವುಗಳನ್ನು ಮಾಡಬೇಡಿ: ಹಸ್ತಲಾಘವ ಮಾಡಬಾರದು. ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಲ್ಲಿ ಬೇರೆ ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು. ಅಂಥವರು ಕಣ್ಣು, ಮೂಗು ಮತ್ತು ಬಾಯಿಯನ್ನು ರ್ಸ³ಸಿಕೊಳ್ಳಬಾರದು. ಅಂಗೈಗಳನ್ನು ಬಳಸಿ ಸೀನುವುದು ಮತ್ತು ಕೆಮ್ಮುವುದನ್ನು ಮಾಡಬಾರದು. ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು. ಅನಗತ್ಯವಾಗಿ ಪ್ರಯಾಣಿಸಬಾರದು. ಕರೊನಾ ಸೋಂಕು ಬಾಧಿತ ಪ್ರದೇಶಗಳಿಗೆ ಪ್ರಯಾಣಿಸಬಾರದು. ಸಾರ್ವಜನಿಕ ಕೂಟ, ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸಬಾರದು. ಕ್ಯಾಂಟೀನ್​ಗಳಲ್ಲಿ ಗುಂಪಾಗಿ ಕುಳಿತುಕೊಳ್ಳಬಾರದು. ಜಿಮ್ ಕ್ಲಬ್ ಹಾಗೂ ಜನಸಂದಣಿ ಪ್ರದೇಶಗಳಿಗೆ ಭೇಟಿ ನೀಡಬಾರದು. ಕರೊನಾ ಕುರಿತು ವದಂತಿಗಳನ್ನು ಹಬ್ಬಿಸಬಾರದು ಹಾಗೂ ಭಯಪಡಬಾರದು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಕಾಳು ಟೆಂಡರ್ ಸ್ಥಗಿತ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಮಾ. 31ರವರೆಗೆ ಕಾಳು ವ್ಯಾಪಾರ ವಹಿವಾಟು, ಟೆಂಡರ್​ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರೈತರು, ಖರೀದಿದಾರರು, ಮಾರಾಟಗಾರರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಎಂ. ಮಣ್ಣೂರ, ಅಧ್ಯಕ್ಷ ಮಹಾವೀರ ಅಳೆಬಸಪ್ಪನವರ ಕೋರಿದ್ದಾರೆ.

ದೂರು ನಿರ್ವಹಣಾ ತಂಡ ರಚನೆ: ಜಿಲ್ಲೆ ವ್ಯಾಪ್ತಿಯಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ದೂರು ನಿರ್ವಹಣಾ ತಂಡ ರಚಿಸಿದೆ. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಲು ಹೆಸ್ಕಾಂ ಜನರಲ್ ಮ್ಯಾನೇಜರ್ ಇಬ್ರಾಹಿಂ ಮೈಗೂರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರು ನಿರ್ವಹಣಾ ತಂಡ ರಚನೆ ಮಾಡಿದೆ. ತಂಡದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುಟುಂಬ ಕಲ್ಯಾಣಾಧಿಕಾರಿ ಎಸ್.ಬಿ. ನಿಂಬಣ್ಣವರ, ಶಿರಸ್ತೇದಾರ ಆರ್.ಎ. ನಾಯಕ, ಅಮೃತ್ ಓಲೇಕಾರ, ಗ್ರಾಮ ಲೆಕ್ಕಾಧಿಕಾರಿ ಸಂಗೀತಾ ಸತಾಳಿ, ಜವಾನ ಡಿ.ಸಿ. ಪಾಟೀಲ ಕಾರ್ಯ ನಿರ್ವಹಿಸಲಿದ್ದಾರೆ. ಈ ತಂಡ ಜಿಲ್ಲಾಧಿಕಾರಿ ಕಾರ್ಯಾಲಯದ ಟೋಲ್ ಫ್ರೀ ದೂ: 1077ಕ್ಕೆ ಬರುವ ದೂರುಗಳ ಸಂಗ್ರಹಣೆ ಮತ್ತು ನಿರ್ವಹಣೆ ಮಾಡಲಿದೆ. ವಿದೇಶಗಳಿಂದ ಬಂದು ಮನೆಗಳಲ್ಲಿ ಕ್ವಾರೈಂಟನ್ ಆಗಿರುವ ವ್ಯಕ್ತಿಗಳ ಕುರಿತು ಬರುವ ದೂರುಗಳನ್ನು ಪರಿಶೀಲಿಸಲಿದೆ. ವಿವಿಧ ಅಧಿಕಾರಿಗಳ ಮೊಬೈಲ್​ಗೆ ಬರುವ ಎಸ್​ಎಂಎಸ್ ಹಾಗೂ ದೂರುಗಳನ್ನೂ ಈ ತಂಡ ಸಂಗ್ರಹಿಸಿ ಪರಿಶೀಲಿಸಿ ಅಗತ್ಯ ಕ್ರಮ ಕೈಕೊಳ್ಳಲಿದೆ. ಸಾರ್ವಜನಿಕರು ದೂರು ನೀಡಲು ಮೊ: 9900521128, 984493743, 9742756762, 961471409, 74831534592, 8884413024 ಸಂರ್ಪಸಬೇಕು ಎಂದು ಜಿಲ್ಲಾಡಳಿತದ ಪ್ರಕಟಣೆ ಕೋರಿದೆ.

ಪಂಚಸಪ್ತತಿ ಮಹೋತ್ಸವ ಮುಂದೂಡಿಕೆ:

ಭಟ್ಕಳ: ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ವಿದ್ಯಾಧಿರಾಜ ಪುರಸ್ಕಾರ, ಶ್ರೀರಾಮನವಮಿ ಉತ್ಸವ, ಗುರುವರ್ಯರ ಪಂಚಸಪ್ತತಿ ಮಹೋತ್ಸವಗಳನ್ನು ಮುಂದೂಡಲಾಗಿದೆ ಎಂದು ಶ್ರೀಮಠದ ಕೇಂದ್ರ ಸಮಿತಿ ತಿಳಿಸಿದೆ. ಮಾ. 26ರಂದು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಾರ ಲಕ್ಷ್ಮಣ ಪೈ ಅವರಿಗೆ ವಿದ್ಯಾಧಿರಾಜ ಪುರಸ್ಕಾರ ಪ್ರದಾನ ಸಮಾರಂಭ, ಏ.2ರಂದು ಶ್ರೀರಾಮನವಮಿ ಮತ್ತು ಏ.14ರಂದು ಶ್ರೀ ಗುರುವರ್ಯರ ಪಂಚಸಪ್ತತಿ (75ವರ್ಷ ಪೂರ್ತಿ) ಮಹೋತ್ಸವ ನಿಗದಿಯಾಗಿತ್ತು. ಆದರೆ, ಕರೊನಾ ರೋಗ ಶಮನದ ಮುಂಜಾಗ್ರತೆ ಕ್ರಮ ಪಾಲಿಸುವುದರ ದೃಷ್ಟಿಯಿಂದ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಮಠದ ವಿಶ್ರಾಂತಿ ಕೊಠಡಿಗಳನ್ನು ಬಂದ್ ಇಡಲಾಗುತ್ತಿದೆ. ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶವಿಲ್ಲ. ಕರೊನಾ ರೋಗ ಸಂಪೂರ್ಣ ನಾಶವಾಗಿ ಎಲ್ಲೆಡೆ ಸುರಕ್ಷತೆ ನೆಲೆಸಿದ ಬಗ್ಗೆ ಕೇಂದ್ರ ಮತ್ತು ಗೋವಾ ಸರ್ಕಾರ ಹಸಿರು ನಿಶಾನೆ ತೋರಿದ ಬಳಿಕ ಉತ್ಸವ, ಕಾರ್ಯಕ್ರಮಗಳ ಮರು ಏರ್ಪಾಡಿನ ದಿನವನ್ನು ನಂತರ ತಿಳಿಸಲಾಗುವುದು. ಮಠದ ಶಾಖಾ ಮಠಗಳ ಮತ್ತು ಮಠದ ಅಧೀನ, ಸಂರಕ್ಷಣಾ ಕಕ್ಷೆಯಲ್ಲಿರುವ ಸ್ವಸಮಾಜದ ದೇವಾಲಯಗಳ ವಾರ್ಷಿಕ ಮಹಾರಥೋತ್ಸವ, ಪ್ರತಿಷ್ಠ ವರ್ಧಂತಿ ಉತ್ಸವಗಳು, ನಗರೋತ್ಸವ, ಅನ್ನಸಂತರ್ಪಣೆ ಮತ್ತಿತರ ಕಾರ್ಯಕ್ರಮಗಳನ್ನೂ ಅನಿರ್ದಿಷ್ಟಕಾಲ ಮುಂದೂಡಲಾಗಿದೆ. ಭಕ್ತರು ಸಹಕರಿಸಬೇಕು ಎಂದು ಮಠದ ಕೇಂದ್ರ ಸಮಿತಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net