

ಹುಬ್ಬಳ್ಳಿ/ಧಾರವಾಡ: ಕರೊನಾ ವೈರಸ್ ನಿಯಂತ್ರಣಕ್ಕೆ ರಾಜ್ಯದಲ್ಲೂ ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಅವರು ಹುಬ್ಬಳ್ಳಿಯ ಕಿಮ್್ಸ, ರೈಲ್ವೆ ಆಸ್ಪತ್ರೆ ಹಾಗೂ ಧಾರವಾಡ ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿ ಮುನ್ನೆಚ್ಚರಿಕೆಯಾಗಿ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.
ಕಿಮ್ಸ್ನ ವಿಶೇಷ ವಾರ್ಡ್ನಲ್ಲಿ ಈಗಾಗಲೇ 12 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಅಗತ್ಯ ಬಿದ್ದರೆ 32 ಹಾಸಿಗೆಗಳವರೆಗೂ ಈ ಸೌಕರ್ಯ ವಿಸ್ತರಿಸಲು ಅವಕಾಶವಿದೆ. ಸರ್ಕಾರದ ಮಾರ್ಗದರ್ಶಿ ಪ್ರಕಾರ ಪೂರಕ ಔಷಧ, ಸಂರಕ್ಷಣಾ ಸಾಮಗ್ರಿ, ತಜ್ಞ ವೈದ್ಯರ ತಂಡ ನಿಯೋಜಿಸಿದ್ದ ಕುರಿತು ಮಾಹಿತಿ ಪಡೆದರು.
ಕರೊನಾ ಸೋಂಕು ತಡೆಗೆ ಜನರು ಭಯಗೊಳ್ಳುವ ಅಗತ್ಯವಿಲ್ಲ. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶುಚಿಯಾದ ಆಹಾರ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳಬೇಕು. ಜಿಲ್ಲಾಡಳಿತ ಈಗಾಗಲೇ ವಿವಿಧ ಆಸ್ಪತ್ರೆಗಳಲ್ಲಿ ತ್ವರಿತ ಚಿಕಿತ್ಸೆಗೆ ಏರ್ಪಾಡು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೂ ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಈ ಹಿಂದೆ ಇಬ್ಬರು ಶಂಕಿತ ರೋಗಿಗಳ ರಕ್ತ ಪರೀಕ್ಷೆ ಮಾಡಿದಾಗ ಋಣಾತ್ಮಕ ವರದಿ ಬಂದಿದೆ. ಅಗತ್ಯ ಬಿದ್ದರೆ ಉತ್ತಮ ಚಿಕಿತ್ಸೆ ನೀಡುವ ಎಲ್ಲ ಸೌಕರ್ಯ ಹೊಂದಿದ್ದೇವೆ ಎಂದರು.
ನಂತರ ಗದಗ ರಸ್ತೆಯಲ್ಲಿರುವ ಕೇಂದ್ರೀಯ ರೈಲ್ವೆ ಆಸ್ಪತ್ರೆಗೆ ಭೇಟಿ ನೀಡಿದ ಅಧಿಕಾರಿಗಳು, ಅಲ್ಲಿನ ಪ್ರತ್ಯೇಕ ವಾರ್ಡ್ ಹಾಗೂ ರೈಲು ನಿಲ್ದಾಣದ ಬಳಿ ಇರುವ ಮಹಿಳಾ ಸುರಕ್ಷಾ ದಳದ ಬ್ಯಾರಕ್ನಲ್ಲಿ ಸಿದ್ಧಪಡಿಸಿದ ಕೊಠಡಿಗಳನ್ನು ಪರಿಶೀಲಿಸಿದರು.
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಹೊರ-ಒಳರೋಗಿಗಳ ವಿಭಾಗ, ನಿಯೋಜಿಸಿರುವ ತಜ್ಞ ವೈದ್ಯರು, ಔಷಧ ಮತ್ತು ಸಂರಕ್ಷಣೆ ಸಾಮಗ್ರಿ ದಾಸ್ತಾನು ಮಾಹಿತಿಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಕೆ. ಮಾನಕರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ ವಿವರಿಸಿದರು. ಕಿಮ್್ಸ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್ ಚವ್ಹಾಣ, ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರವಿ, ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ. ಅರುಣಕುಮಾರ್, ತಹಸೀಲ್ದಾರರಾದ ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಇತರರು ಇದ್ದರು.
ವಿಜ್ಞಾನ ಸಂಭ್ರಮ ವಿಚಾರ ಸಂಕಿರಣ ರದ್ದು: ದೇಶದಲ್ಲಿ ಕರೊನಾ ಹಾವಳಿ ಹೆಚ್ಚಿರುವುದರಿಂದ ಅದನ್ನು ತಡೆಗಟ್ಟುವ ಮುಂಜಾಗ್ರತೆ ಕ್ರಮ ವಾಗಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ಈಗಾಗಲೇ ನಿಗದಿಪಡಿಸಲಾದ ಸೆಮಿನಾರ್, ಕಾರ್ಯಾಗಾರ, ಸಮ್ಮೇಳನಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರವು ಮಾ. 18 ಮತ್ತು 19ರಂದು ನಿಗದಿಪಡಿಸಿದ್ದ ವಿಜ್ಞಾನ ಸಂಭ್ರಮ ವಿಚಾರ ಸಂಕಿರಣವನ್ನು ರದ್ದುಪಡಿಸಲಾಗಿದೆ.
ಶಾಲೆಗಳಿಗೆ ರಜೆ ಇಂದು: ರಂಗಪಂಚಮಿ ನಿಮಿತ್ತ ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ಭಾಗದ ನವನಗರ ಮತ್ತು ಭೈರಿದೇವರಕೊಪ್ಪದ ಸರ್ಕಾರಿ ಶಾಲೆಗಳಿಗೆ ರಜೆ ಘೊಷಿಸಲಾಗಿದೆ. ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನಲ್ಲಿ ಒಂದರಿಂದ ಐದನೇ ತರಗತಿ ಪರೀಕ್ಷೆಗಳನ್ನು ಮುಂಚಿತವಾಗಿ ನಡೆಸಲು ಆದೇಶಿಸಲಾಗಿದೆ. ಮಾರ್ಚ್ 15ರೊಳಗೆ 1ರಿಂದ 5, 16ರಿಂದ 6 ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮಾರ್ಚ್ 27ರಿಂದ ಏಪ್ರಿಲ್ 9ರವರೆಗೆ ನಡೆಸಲು ಸೂಚನೆ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರೀಕ್ಷಾ ಕೊಠಡಿಗೆ ಆಗಮಿಸಲು ಇಲಾಖೆಯಿಂದ ಯಾವುದೇ ಆದೇಶವಿಲ್ಲ ಎಂದು ಶಹರ ಬಿಇಒ ಶ್ರೀಶೈಲ ಕರಿಕಟ್ಟಿ ತಿಳಿಸಿದ್ದಾರೆ.