

ಗದಗ: ಕರೊನಾ ನಿರೋಧಕ ಲಸಿಕಾಕರಣಕ್ಕೆ ಜಿಲ್ಲೆಯ ಏಳು ಕಡೆ ಶನಿವಾರ ಚಾಲನೆ ನೀಡಲಾಯಿತು. ಗುರುತಿಸಿದ್ದ ಎಲ್ಲ ಏಳು ಕಡೆಗೂ ಮುಂಚಿತವಾಗಿ ಲಸಿಕೆ ಡೋಸೇಜ್ ಪೂರೈಸಲಾಗಿತ್ತು. ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಿದ್ದರಿಂದ ಅಚ್ಚುಕಟ್ಟಾಗಿ ಲಸಿಕೆ ಹಾಕುವ ಪ್ರಕ್ರಿಯೆ ಪೂರ್ಣಗೊಂಡಿತು.
ಗದಗ ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆ, ಮಹಾತ್ಮ ಗಾಂಧಿ ವೃತ್ತದ ಬಳಿಯ ತಾಲೂಕು ಆಸ್ಪತ್ರೆ, ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ನರಗುಂದ, ಶಿರಹಟ್ಟಿ, ರೋಣ ಮತ್ತು ಮುಂಡರಗಿ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಕಾರ್ಯ ನಡೆಯಿತು. ಎಲ್ಲ ಏಳು ಕೇಂದ್ರಗಳಲ್ಲಿ ಒಟ್ಟು 664 ಕರೊನಾ ಸೇನಾನಿಗಳಿಗೆ ಲಸಿಕೆ ಹಾಕಲು ಉದ್ದೇಶಿಸಲಾಗಿತ್ತು. ಇದರಲ್ಲಿ ಶನಿವಾರ 469 ಕರೊನಾ ಸೇನಾನಿಗಳಿಗೆ ಲಸಿಕೆ ಹಾಕಲಾಯಿತು.
ಗದಗ ತಾಲೂಕು ಆಸ್ಪತ್ರೆಯಲ್ಲಿ 80, ಗದಗ ಹೆರಿಗೆ ಆಸ್ಪತ್ರೆಯಲ್ಲಿ 69, ಲಕ್ಕುಂಡಿ ಪಿಎಚ್ಸಿಯಲ್ಲಿ 78, ರೋಣ ತಾಲೂಕು ಆಸ್ಪತ್ರೆಯಲ್ಲಿ 66, ಮುಂಡರಗಿಯಲ್ಲಿ 69, ಶಿರಹಟ್ಟಿ 53 ಹಾಗೂ ನರಗುಂದದಲ್ಲಿ 54 ಜನರಿಗೆ ಲಸಿಕೆ ಹಾಕಲಾಯಿತು.
ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆ ಸೇರಿ ಎರಡು ಸೆಂಟರ್ಗಳಲ್ಲಿ ಬೆಳಗ್ಗೆ 11ರಿಂದ ಲಸಿಕೆ ಹಾಕುವ ಕಾರ್ಯ ಆರಂಭವಾಯಿತು. 11.05ಕ್ಕೆ ಆರೋಗ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕರಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಲಸಿಕೆ ಹಾಕಿಸಿಕೊಂಡವರನ್ನು 30 ನಿಮಿಷ ಕಾಲ ನಿಗಾದಲ್ಲಿ ಇರಿಸಲಾಯಿತು. ಜಿಲ್ಲೆಯಲ್ಲಿ ಎಲ್ಲಿಯೂ ಲಸಿಕೆ ಪಡೆದವರ ಆರೋಗ್ಯದಲ್ಲಿ ಏರುಪೇರು ಆಗದಿರುವುದು ಸಂತಸ ಉಂಟು ಮಾಡಿತು. ಜಿಲ್ಲೆಯಲ್ಲಿ ಒಟ್ಟು 9 ಸಾವಿರ ಕರೊನಾ ಸೇನಾನಿಗಳಿದ್ದು ಎಲ್ಲರಿಗೂ ಲಸಿಕೆ ಹಾಕಲಾಗುವುದು. ಜ. 18, 19 ರಂದು ಲಸಿಕೆ ಹಾಕುವ ಕಾರ್ಯ ಮುಂದುವರಿಯಲಿದೆ ಎಂದು ಆರೋಗ್ಯಾಧಿಕಾರಿ. ಡಾ. ಬಿ.ಎಂ. ಗೊಜನೂರ ವಿವರಿಸಿದರು.
ನಗರದ ತಾಲೂಕು ಆಸ್ಪತ್ರೆಗೆ ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ.ಕೆ., ದ್ರಾಕ್ಷರಸ ನಿಗಮದ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಭೇಟಿ ನೀಡಿ ಲಸಿಕೆ ಪಡೆದುಕೊಂಡವರ ಆರೋಗ್ಯ ವಿಚಾರಿಸಿದರು.
ಜಿಲ್ಲೆಯ ಏಳು ಕೇಂದ್ರಗಳಲ್ಲಿ ಲಸಿಕೆ ಹಾಕುವ ಕಾರ್ಯ ಅತ್ಯಂತ ಯಶಸ್ವಿಯಾಗಿ ಜರುಗಿತು. ಆರಂಭದಲ್ಲಿ ಕೆಲವರು ಉದ್ವೇಗಕ್ಕೆ ಒಳಗಾಗುವುದು, ಗಾಬರಿಪಡುವುದು, ಏನಾಗಲಿದೆಯೋ ಎಂಬ ಆತಂಕಕ್ಕೆ ಒಳಗಾಗಿದ್ದರು.ಆದರೆ, ಅವರಿಗೆಲ್ಲ ಧೈರ್ಯ ಹೇಳಿ ಲಸಿಕೆ ನೀಡಲಾಯಿತು. ಲಸಿಕೆ ಪಡೆದವರೆಲ್ಲರೂ ಆರೋಗ್ಯದಿಂದ ಇದ್ದಾರೆ. ಲಸಿಕೆ ಪಡೆದ ಅರ್ಧ ಗಂಟೆ ವಿಶ್ರಾಂತಿ ಪಡೆದು ಮನೆಗೆ ತೆರಳಿದರು. ಕರೊನಾ ಹೋಗಲಾಡಿಸಲು ಲಸಿಕೆ ರಾಮಬಾಣವಾಗಿದೆ. | ಡಾ.ಆನಂದ.ಕೆ. ಪ್ರಭಾರ ಜಿಲ್ಲಾಧಿಕಾರಿ, ಗದಗ
ವಿಶ್ವಕ್ಕೆ ಮಾದರಿಯಾದ ಭಾರತ
ಗಜೇಂದ್ರಗಡ: ಕೋವಿಡ್ ವಿರುದ್ಧದ ಹೋರಾಟದ ಹಲವು ವಿಚಾರಗಳಲ್ಲಿ ಜಗತ್ತಿಗೆ ಭಾರತ ಮಾದರಿಯಾಗಿದೆ. ಒಂದೇ ವರ್ಷದಲ್ಲಿ ಎರಡು ಮೇಡ್ ಇನ್ ಇಂಡಿಯಾ ಲಸಿಕೆಗಳು ತಯಾರಾಗಿವೆ. ಇದಕ್ಕೆ ಕಾರಣರಾಗಿರುವ ವಿಜ್ಞಾನಿಗಳ ಕಾರ್ಯ ಪ್ರಶಂಸನೀಯ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಕೋವಿಶೀಲ್ಡ್ ಲಸಿಕೆಗೆ ಸಾಂಕೇತಿಕವಾಗಿ ಚಾಲನೆ ಅವರು ಮಾತನಾಡಿದರು.
ಡಾ.ಚಿದಾನಂದ ಮುಂಡಾಸದ ಮಾತನಾಡಿ, ಲಸಿಕೆ ನೀಡುವ ಕಾರ್ಯದಲ್ಲಿ ಕರೊನಾ ಸೇನಾನಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ನೌಕರರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು. ತಹಸೀಲ್ದಾರ್ ಅಶೋಕ ಕಲಘಟಗಿ, ಪುರಸಭೆ ಮಾಜಿ ಸದಸ್ಯರಾದ ಅಶೋಕ ವನ್ನಾಲ, ಶರಣಪ್ಪ ರೇವಡಿ, ಭಾಸ್ಕರ ರಾಯಬಾಗಿ, ದತ್ತೂಸಾ ಬಾಕಳೆ, ಬಾಳಾಜಿ ಭೋಸ್ಲೆ, ತಾಲೂಕು ವೈದ್ಯಾಧಿಕಾರಿ ಬಿ.ಎಸ್. ಭಜಂತ್ರಿ, ಕೆ.ಎ. ಹಾದಿಮನಿ, ಆಶಾದೇವಿ ನಾಯಕ, ರಮೇಶ ದೀವಣಗಿ, ಸುನೀಲ ಹಬೀಬ, ದೇವೇಂದ್ರಪ್ಪ ಬಡಿಗೇ, ರವಿ.ಆರ್. ಪಾಟೀಲ, ಪುಷ್ಪಾ ಪಾಗಿ, ಪ್ರವೀಣ ರಾಠೋಡ ಇತರರು ಇದ್ದರು.