ಕರೊನಾ ಸೇನಾನಿಗಳಿಗೆ ಗೌರವ

6CBP2
Published on

ಚಿಕ್ಕಬಳ್ಳಾಪುರ : ಭವಿಷ್ಯದಲ್ಲಿ ಎಂತಹದ್ದೇ ವೈರಾಣು ಸೃಷ್ಟಿಯಾದರೂ ಒಗ್ಗಟ್ಟಿನ ಹೋರಾಟ ನಡೆಸುವ ಶಕ್ತಿ ಭಾರತಕ್ಕಿರುವುದನ್ನು ಕರೊನಾ ವಿರುದ್ಧದ ಸಮರ ನಿರೂಪಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರೊನಾ ಸೇನಾನಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಬಲ ರಾಷ್ಟ್ರಗಳಿಗೆ ಸಮರ್ಪಕವಾಗಿ ಸೋಂಕು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. 1 ಚ.ಕಿ.ಮೀ.ಗೆ 35 ಜನ ವಾಸಿಸುವ ಅಮೇರಿಕದಲ್ಲೇ ಹೆಚ್ಚು ಸೋಂಕು ಮತ್ತು ಸಾವು ಸಂಭವಿಸಿವೆ. ಆದರೆ, 1 ಚ.ಕಿ.ಮೀ.ಗೆ 450 ಜನ ಇರುವ ಭಾರತದಲ್ಲಿ ಹಿಡಿತ ಸಾಧಿಸಲಾಗಿದೆ ಎಂದರು.

ಗಡಿಯಲ್ಲಿ ಸೈನಿಕರು ದೇಶ ಕಾಯುತ್ತಿದ್ದರೆ, ಗಡಿಯೊಳಗೆ ಕರೊನಾ ಸೇನಾನಿಗಳು ಸಂಕಷ್ಟದ ಪರಿಸ್ಥಿತಿಯಲ್ಲಿ ಸೋಂಕಿನ ವಿರುದ್ಧದ ಹೋರಾಟದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆಗೆ ಭಾರತೀಯರು ಒಗ್ಗಟ್ಟು ಪ್ರದರ್ಶಿಸಿದ್ದು ದೀಪ ಬೆಳಗುವ, ಚಪ್ಪಾಳೆ ತಟ್ಟುವ ಮತ್ತು ಪುಷ್ಪವೃಷ್ಟಿಯ ಮೂಲಕ ಸೇನಾನಿಗಳಿಗೆ ಗೌರವ ಸಲ್ಲಿಸಿದ್ದು ಶ್ಲಾಘನೀಯ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕರೊನಾ ಸೇನಾನಿಗಳ ಸೇವೆಯಿಂದ ಆತಂಕಕಾರಿ ವಾತಾವರಣವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. ಅವರನ್ನು ಸನ್ಮಾನಿಸುವ ಮೂಲಕ ಮತ್ತಷ್ಟು ಕೆಲಸ ಮಾಡಲು ಪ್ರೋತ್ಸಾಹಿಸಿದಂತಾಗಿದೆ ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ತಿಳಿಸಿದರು.ಜಿಪಂ ಸಿಇಒ ಬಿ.ೌಜೀಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಕರೊನಾ ಸೇನಾನಿಗಳ ಸನ್ಮಾನ ತಂಡದ ಪದಾಧಿಕಾರಿಗಳಾದ ಎಂ.ಜಯರಾಮ್, ಪ್ರೊ ಕೋಡಿರಂಗಪ್ಪ, ಪೆರಿಕಲ್ ಕೆ.ವಿ.ಮಂಜುನಾಥ್, ಮೊಬೈಲ್ ಬಾಬು, ಎಸ್.ಮುನಿರಾಮು ಇತರರಿದ್ದರು.

ಸಿದ್ಧತೆಗೆ ಲಾಕ್‌ಡೌನ್ ಅನುಕೂಲ: ಜನತಾ ಕರ್ಫ್ಯೂ ಮತ್ತು ಲಾಕ್‌ಡೌನ್ ಘೋಷಣೆಯಿಂದ ಆಸ್ಪತ್ರೆಯಲ್ಲಿ ಹಾಸಿಗೆ, ವೆಂಟಿಲೇಟರ್ ವ್ಯವಸ್ಥೆ, ಪ್ರಯೋಗಾಲಯಗಳ ಸ್ಥಾಪನೆ ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಹಕಾರಿಯಾಗಿದೆ, ಮುಂದಿನ ದಿನಗಳಲ್ಲಿ ವೈರಾಣುವಿನೊಂದಿಗೆ ಜೀವನ ನಡೆಸುತ್ತ ಜೀವ ಕಾಪಾಡಿಕೊಳ್ಳಬೇಕಾಗಿರುವುದು ಜನರ ಹೊಣೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮುನ್ನೆಚ್ಚರಿಕೆ ನಿಯಮಗಳನ್ನು ಪಾಲಿಸಬೇಕು ಎಂದರು.

ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ : ಸರ್ಕಾರ ಘೋಷಣೆಗೂ ಮೊದಲೇ ಜಿಲ್ಲೆಯಲ್ಲಿ ಸೀಲ್‌ಡೌನ್, ಸ್ವಯಂ ಸೇವಕರಿಂದ ಮನೆ ಮನೆಗೂ ಸೇವೆ, ಸ್ಥಳೀಯ ಆ್ಯಪ್ ಮೂಲಕ ಮಾಹಿತಿ ಸಂಗ್ರಹ ಸೇರಿ ನಾನಾ ಕ್ರಮಗಳಿಂದ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಯಿತು. ಖಾಲಿಯಾಗಿದ್ದ ಹಳೇ ಜಿಲ್ಲಾಸ್ಪತ್ರೆ ಬಳಸಿಕೊಂಡು 100 ಹಾಸಿಗೆ ವ್ಯವಸ್ಥೆ ಕೈಗೊಂಡಿದ್ದರ ಜತೆಗೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ 335 ಮಂದಿ ವಲಸೆ ಕಾರ್ಮಿಕರನ್ನು ತಕ್ಷಣ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಯಿತು. ಈಗಾಗಲೇ 90 ಮಂದಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಪುಷ್ಪವೃಷ್ಟಿ : ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕಾಗಿ ಶ್ರಮಿಸಿದ ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತರು, ಪೊಲೀಸರು, ಪೌರಕಾರ್ಮಿಕರು, ರೆಡ್‌ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿ ಕರೊನಾ ಸೇನಾನಿಗಳಿಗೆ ಸನ್ಮಾನಿಸಲಾಯಿತು. ವೇದಿಕೆ ಮುಂಭಾಗ ಆಸೀನರಾಗಿದ್ದ 180ಕ್ಕೂ ಹೆಚ್ಚು ಸೇನಾನಿಗಳ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಸಚಿವರು ಶಾಲು ಹೋದಿಸಿ, ಸನ್ಮಾನಿಸಿದರು. ಹಲವರು ಸೇವೆಯ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net