ಕರೊನಾ ಸೇನಾನಿಗಳಿಗಿಂದು ಲಸಿಕೆ

vacine
Published on

ಗದಗ: ಬಹುನಿರೀಕ್ಷಿತ ಕೋವಿಡ್-19 ಲಸಿಕೆ ಹಾಕುವ ಕಾರ್ಯಕ್ರಮ ಜಿಲ್ಲೆಯ ಏಳು ಕಡೆಗಳಲ್ಲಿ ಶನಿವಾರ ನಡೆಯಲಿದೆ. ಇದಕ್ಕಾಗಿ ಗುರುತಿಸಿರುವ ಎಲ್ಲ ಏಳು ಸ್ಥಳಗಳಿಗೂ ಲಸಿಕೆ ಪೂರೈಸಲಾಗಿದೆ. ಜತೆಗೆ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಗದಗ ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆ, ಮಹಾತ್ಮ ಗಾಂಧಿ ವೃತ್ತದ ಬಳಿಯ ತಾಲೂಕು ಆಸ್ಪತ್ರೆ, ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ನರಗುಂದ, ಶಿರಹಟ್ಟಿ, ರೋಣ ಮತ್ತು ಮುಂಡರಗಿ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಕಾರ್ಯ ನಡೆಯಲಿದೆ. ಎಲ್ಲ ಏಳು ಕೇಂದ್ರಗಳಲ್ಲಿ ಒಟ್ಟು 600 ಕರೊನಾ ಸೇನಾನಿಗಳಿಗೆ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಗೆ ಈಗಾಗಲೇ 5500 ಡೋಸೇಜ್ ಲಸಿಕೆ ತರಿಸಲಾಗಿದೆ.

ಈಗಾಗಲೇ ಗದಗ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ತಾಲೂಕು ಆಸ್ಪತ್ರೆ ನರಗುಂದ, ಸಮುದಾಯ ಆರೋಗ್ಯ ಕೇಂದ್ರ ಲಕ್ಷೆ್ಮೕಶ್ವರ, ರೋಣ ತಾಲೂಕಿನ ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮುಂಡರಗಿ ತಾಲೂಕಿನ ಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜರುಗಿದ ಪ್ರಯೋಗಾರ್ಥ ಕಲ್ಪಿತ ಲಸಿಕೆ ಪರೀಕ್ಷೆಯಲ್ಲಿ ಲಸಿಕೆ ಸಾಗಣೆಯಿಂದ ಹಿಡಿದು ಅದನ್ನು ವ್ಯಕ್ತಿಗೆ ಹಾಕುವವರೆಗೆ ಪ್ರತಿ ಹಂತಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸಿದೆ.

ಕಲ್ಪಿತ ಲಸಿಕೆ ಹಾಕುವ ಪ್ರಯೋಗಕ್ಕೆ ಪ್ರತಿ ಆಸ್ಪತ್ರೆಗೆ ತಲಾ 25 ಜನರನ್ನು ಕರೊನಾ ಸೇನಾನಿಗಳಾಗಿ ಬಳಸಿಕೊಳ್ಳಲಾಯಿತು. ಕೋವಿನ್ ಆಪ್​ನಲ್ಲಿ ಈಗಾಗಲೇ ಜಿಲ್ಲೆಯ ಕರೊನಾ ವಾರಿಯರ್ಸ್​ಗಳ ಹೆಸರು ನೋಂದಣಿಯಾಗಿದ್ದು, ಯಾವುದೇ ತೊಂದರೆ ಇಲ್ಲದೆ ಲಸಿಕೆ ಹಾಕುವ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಕೇಂದ್ರಕ್ಕೆ ಮೂರು ಕೊಠಡಿ

ಜಿಲ್ಲೆಯ ಎಲ್ಲ ಏಳು ಕೇಂದ್ರಗಳಲ್ಲೂ ಕಾಯ್ದಿರಿಸಿದ (ವೇಟಿಂಗ್) ಕೊಠಡಿ, ವ್ಯಾಕ್ಸಿನೇಷನ್ (ಚುಚ್ಚುಮದ್ದು) ಕೊಠಡಿ ಮತ್ತು ಆಬ್ಸರ್ವೆಷನ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಕೊಠಡಿಗೆ ಒಬ್ಬ ಪೊಲೀಸ್ ಪೇದೆ, ಕಂದಾಯ ಇಲಾಖೆ ಸಿಬ್ಬಂದಿ (ಗ್ರಾಮ ಲೆಕ್ಕಾಧಿಕಾರಿ), ಇಬ್ಬರು ಮಹಿಳಾ ಆರೋಗ್ಯ ಸಹಾಯಕಿಯರು, ಒಬ್ಬರು ಆಶಾ ಕಾರ್ಯಕರ್ತೆ ಸೇರಿ ಐದು ಜನರ ತಂಡವನ್ನು ನಿಯೋಜಿಸಲು ಕ್ರಮಕೈಗೊಳ್ಳಲಾಗಿದೆ.

ಮಾಸ್ಕ್, ಪರಸ್ಪರ ಅಂತರ ಕಡ್ಡಾಯ

ಗದಗಜಿಲ್ಲೆಗೆ ಹಂಚಿಕೆ ಮಾಡಿರುವ ಲಸಿಕೆಯನ್ನು ಗುರುತಿಸಲಾಗಿರುವ 7 ಲಸಿಕಾ ಕೇಂದ್ರಗಳಿಗೆ ವಿತರಿಸಲಾಗಿದೆ. ಪ್ರಥಮ ಹಂತದಲ್ಲಿ ಆರೋಗ್ಯ ಇಲಾಖೆ ನೌಕರರು, ಅಧಿಕಾರಿಗಳು ಸೇರಿದಂತೆ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಸಿಬ್ಬಂದಿಗಳಿಗೆ ಲಸಿಕೆ ನೀಡಲು ಸೂಚಿಸಲಾಗಿದೆ ಎಂದು ಪ್ರಭಾರಿ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಡಿಯೋ ಸಂವಾದ ಸಭೆಯ ನಂತರ ಅವರು ಮಾತನಾಡಿದರು.

ದೇಶಾದ್ಯಂತ ಕೋವಿಡ್-19 ಲಸಿಕೆ ನೀಡುವ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡುವರು. ತದನಂತರ ಜಿಲ್ಲೆಯಲ್ಲಿ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಲಸಿಕೆಯನ್ನು ಶನಿವಾರ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ನೀಡಬೇಕೆಂದು ಸರ್ಕಾರ ಸೂಚಿಸಿದೆ. ಲಸಿಕೆ ಪಡೆಯಲು ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪರಸ್ಪರ ಅಂತರ ಹಾಗೂ ಸ್ಯಾನಿಟೈಸರ್ ಬಳಸಬೇಕು. ಈ ಕುರಿತು ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕೆಂದು ಸೂಚಿಸಿದರು. ಡಾ. ಬಿ.ಎಂ. ಗೊಜನೂರ ಮಾತನಾಡಿ, ಆರೋಗ್ಯ ಇಲಾಖೆಯ ಗ್ರುಪ್ ಡಿ ನೌಕರರಿಗೆ ಮೊದಲು ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ, ಡಿಎಸ್ಪಿ ಕೆ. ಪ್ರಲ್ಹಾದ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ಒಟ್ಟು 9000 ಕರೊನಾ ಸೇನಾನಿಗಳಿದ್ದಾರೆ. ಇದರಲ್ಲಿ ಸದ್ಯ 600 ಜನರಿಗೆ ಮಾತ್ರ ಲಸಿಕೆ ಹಾಕಲಾಗುತ್ತಿದೆ. ಉಳಿದವರಿಗೆ ಜ. 18, 19 ಮತ್ತು 20ರಂದು ಲಸಿಕೆ ಹಾಕಲು ಉದ್ದೇಶಿಸಲಾಗಿದೆ. ಲಸಿಕೆ ಹಾಕುವ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಏಳು ಕೇಂದ್ರಗಳಲ್ಲಿ ಜ.16 ರಂದು ಬೆಳಗ್ಗೆ 9 ಗಂಟೆಗೆ ಅಗತ್ಯ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ಹಾಜರು ಇರಲಿದೆ. | ಡಾ.ಬಿ.ಎಂ. ಗೊಜನೂರ, ಲಸಿಕೆ ಹಾಕುವ ಕಾರ್ಯಕ್ರಮದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net