ಕರೊನಾ ಸೇನಾನಿಗಳನ್ನು ಎಲ್ಲರೂ ಗೌರವಿಸಿ

h24-Muttannavar 2
Published on

ಹುಬ್ಬಳ್ಳಿ: ಕರೊನಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ನಗರದ ವೀರಾಪುರ ಓಣಿಯ ಶಿವಾನಂದ ಮುತ್ತಣ್ಣವರ ಗೆಳೆಯರ ಬಳಗದಿಂದ ಬೆಂಡಿಗೇರಿ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಸನ್ಮಾನಿಸಲಾಯಿತು.

ಮಹಾನಗರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಬೆಂಡಿಗೇರಿ ಠಾಣೆ ಪೊಲೀಸರು ಹಾಗೂ ಮಹಿಳಾ ಪೇದೆ ಸೇರಿ ಸುಮಾರು 70 ಜನರನ್ನು ಸನ್ಮಾನಿಸಲಾಯಿತು. ಮಹಿಳಾ ಪೇದೆಗಳಿಗೆ ಸೀರೆ, ಉಳಿದ ಸಿಬ್ಬಂದಿಗೆ ರೇಷ್ಮೆ ಶಾಲು ಹಾಗೂ ಅಗತ್ಯ ವಸ್ತುಗಳ ಕಿಟ್ ನೀಡಲಾಯಿತು.

ನೇತೃತ್ವ ವಹಿಸಿದ್ದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮಾತನಾಡಿ, ಪೊಲೀಸರು ಕರೊನಾ ಸೇನಾನಿಗಳಾಗಿ ಅವಿರತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಪೊಲೀಸ್ ಠಾಣೆ ಸುತ್ತಲಿರುವ ರಾಜಕಾರಣಿಗಳು ಹಾಗೂ ಸಂಘಟನೆಗಳು ಪಕ್ಷ ಭೇದ ಮರೆತು ಪೊಲೀಸರನ್ನು ಸನ್ಮಾನಿಸಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರೂ ಪೊಲೀಸರಿಗೆ ಗೌರವ ನೀಡಬೇಕು. ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತೆಯರು, ಪೌರ ಕಾರ್ವಿುಕರು, ನೀರು ಪೂರೈಸುವ ವಾಲ್​ವುನ್​ಗಳನ್ನು ಸಹ ಗೌರವದಿಂದ ಕಾಣಬೇಕು ಎಂದರು.

ಸ್ವರ್ಣ ಗ್ರುಪ್​ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ, ಅಮೃತ ಜೈನ್, ಶೇಖರ ಬಿಜವಾಡ, ಮಹಾಂತೇಶ ಗಿರಿಮಠ, ವಿಶ್ವನಾಥ ಹರ್ಲಾಪೂರ, ಗಣೇಶ ಅಮರಾವತಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net