ಕರೊನಾ ಸೇನಾನಿ ಮೇಲೆ ಹಲ್ಲೆ

13-06 Wadi-01
Published on

ವಾಡಿ: ಸಮೀಪದ ಶಾಂಪುರಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಯರು ಹಾಗೂ ಆಕೆಯ ಪತಿಯ ಮೇಲೆ ಶುಕ್ರವಾರ ರಾತ್ರಿ ಹಲ್ಲೆ ಮಾಡಲಾಗಿದೆ.
ಮೇಲಧಿಕಾರಿಗಳ ಸೂಚನೆ ಮೇರೆಗೆ ಆಶಾ ಕಾರ್ಯಕರ್ತೆ ಜ್ಯೋತಿ ಪವಾರ್ ಕರೊನಾ ಸೋಂಕಿತರ ಮಾಹಿತಿ ಸಂಗ್ರಹಿಸಲು ತೆರಳಿದ್ದ ವೇಳೆ ರವಿ ರಾಠೋಡ, ಆತನ ಪತ್ನಿ ಶಾಂತಾಬಾಯಿ ಹಾಗೂ ಕಾಳುರಾಮ ರಾಠೋಡ ಮಾಹಿತಿ ನೀಡಲು ನಿರಾಕರಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಮಹಾರಾಷ್ಟ್ರದಿಂದ ಬಂದ ಇವರ ಕುಟುಂಬದ ಸದಸ್ಯರು 14 ದಿನಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿದ್ದು ಬಂದಿದ್ದರು. ಮನೆಗೆ ಬಂದ ನಂತರ ವರದಿಯಲ್ಲಿ ಸೋಂಕು ದೃಢಪಟ್ಟಿದ್ದು, ನೀನೇ ಸುಳ್ಳು ವರದಿ ನೀಡಿರುವೆ ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಆಶಾ ಕಾರ್ಯಕರ್ತೆ ಪತಿ ತಾರಾಸಿಂಗ್ ಪವಾರ್ ಬಿಡಿಸಲು ಬಂದಾಗ ಆತನ ಮೇಲೂ ರಾಡಿನಿಂದ ಹಲ್ಲೆ ಮಾಡಿದ್ದು, ಎಡಗಾಲಿಗೆ ಗಾಯಗಳಾಗಿವೆ ಎಂದು ಜ್ಯೋತಿ ಪವಾರ್ ಆರೋಪಿಸಿದ್ದಾರೆ.
ಘಟನೆ ಖಂಡಿಸಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಯೊಂದಿಗೆ ವಾಡಿ ಠಾಣೆಯಲ್ಲಿ ಜ್ಯೋತಿ ಪವಾರ್ ದೂರು ಸಲ್ಲಿಸಿದರು. ವಾಡಿ ಠಾಣೆಯಲ್ಲಿ ಒಂದೇ ಕುಟುಂಬದ ಮೂರು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವಿಜಯಕುಮಾರ ಬಾವಗೆ ಆರೋಪಿಗಳ ಪತ್ತೆಯಲ್ಲಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net