ಕರೊನಾ ಸೇನಾನಿ ಕುಟುಂಬಕ್ಕೆ ಸಚಿವರ ಸಹಾಯ

2 nrd tahasildar 1
Published on

ನರಗುಂದ:ಕರ್ತವ್ಯದ ವೇಳೆಯೇ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದ ತಾಲೂಕಿನ ಕೊಣ್ಣೂರ ಗ್ರಾಮದ 108 ಆಂಬುಲೆನ್ಸ್ ಚಾಲಕ ಉಮೇಶ ಹಡಗಲಿ ಅವರ ಕುಟುಂಬಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ವೈಯಕ್ತಿಕವಾಗಿ 20 ಸಾವಿರ ರೂ. ಸಹಾಯ ನೀಡಿದ್ದಾರೆ.

‘ತಾಳಿ ಅಡವಿಟ್ಟು ತಿಥಿ ಕಾರ್ಯ ಮಾಡಿದ ಪತ್ನಿ’ ಎಂಬ ಶೀರ್ಷಿಕೆಯಡಿ ಜೂ.2 ರಂದು ‘ವಿಜಯವಾಣಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿರುವ ಸಚಿವರು, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸೂಚನೆ ಪ್ರಕಾರ ಸರ್ಕಾರದಿಂದ ದೊರೆಯುವ ಎಲ್ಲ ಸಹಾಯಧನವನ್ನು ಉಮೇಶ ಕುಟುಂಬಕ್ಕೆ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ವಿಜಯವಾಣಿ ವರದಿಗೆ ಸ್ಪಂದಿಸಿರುವ ಬೆಂಗಳೂರಿನ ವಿಜಯಕುಮಾರ ವಿ.ಕೆ ಎಂಬುವರು ಕೂಡ ಮೃತ ಉಮೇಶ ಪತ್ನಿ ಜ್ಯೋತಿ ಅವರ ಖಾತೆಗೆ ಮಂಗಳವಾರ ಸಹಾಯದ ರೂಪದಲ್ಲಿ 10 ಸಾವಿರ ರೂ. ಜಮೆ ಮಾಡಿದ್ದಾರೆ.

ಇನ್ನು ಸೋಮವಾರ ಸಂಜೆ ಉಮೇಶ ಅವರ ಮನೆಗೆ ಭೇಟಿ ನೀಡಿದ ತಹಸೀಲ್ದಾರ್ ಎ.ಎಚ್. ಮಹೇಂದ್ರ, ಉಮೇಶ ಪತ್ನಿ ಜ್ಯೋತಿ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ಮೃದು ಸ್ವಭಾವದವರಾಗಿದ್ದ ಉಮೇಶ ಅವರು ಕರೊನಾ ಸೇನಾನಿಯಾಗಿ ಸಾಕಷ್ಟು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಾರೆ. ಉಮೇಶ ಅವರ ಸಾವು ನರಗುಂದ ತಾಲೂಕಾಡಳಿತಕ್ಕೆ ತುಂಬ ನೋವುಂಟು ಮಾಡಿದೆ. ಸರ್ಕಾರದಿಂದ ದೊರೆಯುವ ಎಲ್ಲ ಸಹಾಯವನ್ನು ಅವರ ಕುಟುಂಬದವರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net