

ವಿಜಯವಾಣಿ ಸುದ್ದಿಜಾಲ ಹುಳಿಯಾರು
ಕರೊನಾ ಸಂಕಷ್ಟದ ನಡುವೆಯೂ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ವ್ಯಾಪಕ ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಹುಳಿಯಾರು ಹೋಬಳಿ ಚಿಕ್ಕಬಿದರೆ ಕೋಡಿಹಳ್ಳಿಯ ಮುಖಂಡ ನಂದೀಶ್ ಸೇರಿ ಅನೇಕರನ್ನು ಭಾನುವಾರ ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದ ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ನೀರಾವರಿಗೆ ಆದ್ಯತೆ ನೀಡಿದ ಫಲವಾಗಿ ಹೇಮಾವತಿ ಯೋಜನೆಯಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸಿದ್ದೇನೆ. ಭದ್ರಾ ಹಾಗೂ ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ನೂರಾರು ಕಿಲೋ ಮೀಟರ್ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದೇನೆ. ವಿದ್ಯುತ್ ಸಮಸ್ಯೆ ನಿವಾರಿಸಿದ್ದೇನೆ. ಜಲಜೀವನ್ ಮಿಷನ್ ಯೋಜನೆಯಿಂದ ಮನೆಮನೆಗೂ ನಲ್ಲಿ ಹಾಕಿಸಿ ನೀರು ಪೂರೈಕೆ ಮಾಡುತ್ತಿದ್ದೇನೆ. ಈ ಅಭಿವೃದ್ಧಿ ಕೆಲಸಗಳನ್ನು ಮತದರರಿಗೆ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಚಿಕ್ಕಬಿದರೆ ಕೋಡಿಹಳ್ಳಿಯ ಶೇಖರ್, ಚಿಕ್ಕಬಿದರೆಸ್ವಾಮಿ, ಬರಕನಹಾಲ್ ವಿಶ್ವನಾಥ್, ಮೋಹನ್‌ಕುಮಾರ್‌ರೈ, ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ಇದ್ದರು.
ಜೆಸಿಎಂ ಪತ್ನಿ ತ್ರಿವೇಣಿ ಪ್ರಚಾರ: ಸಚಿವ ಮಾಧುಸ್ವಾಮಿ ಪತ್ನಿ ತ್ರಿವೇಣಿ ಕೂಡ ಸುಡುಬಿಸಿಲು ಲೆಕ್ಕಿಸದೆ ಚುನಾವಣಾ ಪ್ರಚಾರ ನಡೆಸಿದರು. ಬುಕ್ಕಾಪಟ್ಟಣ ಹೋಬಳಿ ಶಾಕದಡು ಗ್ರಾಮದಲ್ಲಿ ಪತಿ ಪರವಾಗಿ ಚುನಾವಣಾ ಪ್ರಚಾರ ನಡೆಸಿ, ಬಿಜೆಪಿ ಸರ್ಕಾರ ಹಾಗೂ ಮಾಧುಸ್ವಾಮಿ ಅವರು ಇಡೀ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನದಟ್ಟು ಮಾಡಿಕೊಟ್ಟರು.