

ತುಮಕೂರು: ರಾಜ್ಯದ ಹಿತಕ್ಕಾಗಿ ಹಲವಾರು ಕಾಯ್ದೆಗಳಿಗೆ ತಿದ್ದುಪಡಿ ತಂದು ಸುಧಾರಣೆ ಮಾಡಲಾಗಿದ್ದು, ವಿರೋಧ ಪಕ್ಷಗಳು ಅಪಪ್ರಚಾರ ನಡೆಸುತ್ತಿವೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ರಾಜ್ಯ ಸರ್ಕಾರದ ಸಾಧನೆಯ ಕಿರು ಹೊತ್ತಗೆ ಬಿಡುಗಡೆ ಹಾಗೂ ಸಂವಾದದ ನೇರ ಪ್ರಸಾರ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ಜನರ ವೈಯಕ್ತಿಕ ಜೀವನ, ಕೈಗಾರಿಕಾ ಅಭಿವೃದ್ಧಿ ಹಾಗೂ ವ್ಯಾಪಾರಸ್ಥರ ಅನುಕೂಲಕ್ಕಾಗಿ ಶಾಸನಾತ್ಮಕವಾಗಿ ಕೆಲಸ ಮಾಡುವ ಮೂಲಕ ಈ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ, ಕರೊನಾ ಸಂಕಷ್ಟದಲ್ಲಿ ಅನಿವಾರ್ಯವಾಗಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೆ ಎಂದರು.
ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ 29000 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕೇಂದ್ರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೋಟ್ಯಂತರ ರೂಪಾಯಿ ವ್ಯಯಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು. ಬೀದರ್, ಶ್ರೀರಂಗಪಟ್ಟಣ ಮಾರ್ಗದಲ್ಲಿಯೂ ರೈಲು ಸಂಚಾರ ಆರಂಭಿಸಲು ಸರ್ವೇ ಕಾರ್ಯಕ್ಕೆ ಚಿಂತಿಸಲಾಗಿದೆ, ಚೆನ್ನೈ-ಮುಂಬೈ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯಡಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಭೆ ನಡೆಸಲಾಗುತ್ತಿದೆ ಎಂದರು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲಾ ಜಯರಾಮ್, ಜಿಲ್ಲಾಧಿಕಾರಿ
ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯತ್ ಪಂ ಸಿಇಒ ಶುಭಾಕಲ್ಯಾಣ್ ಮತ್ತಿತರರು ಇದ್ದರು.
ಬುಕ್ಕಾಪಟ್ಟಣ ಹೋಬಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ : ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಹೇಮಾವತಿ, ಎತ್ತಿಹೊಳೆ ಹಾಗೂ ಭದ್ರಾ ಯೋಜನೆಯ ಸಮರ್ಪಕ ಬಳಕೆಗೆ ಶ್ರಮಿಸಲಾಗುತ್ತಿದೆ. ಈ ವಾರದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಯಳನಡು ಹಾಗೂ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ ಎಂದು ಜೆ.ಸಿ.ಮಾಧುಸ್ವಾಮಿ ಘೋಷಿಸಿದರು.
ತಾಂತ್ರಿಕ ಅಂಶಗಳ ಚಿಂತನೆ : ತಿಪಟೂರು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಎತ್ತಿನಹೊಳೆ ಯೋಜನೆ ಕೆಲಸಗಳಾಗಿವೆ, ಕೊರಟಗೆರೆ ತಾಲೂಕಿನಲ್ಲಿ ಬಫರ್‌ಡ್ಯಾಮ್ ನಿರ್ಮಿಸಲು ಅಗತ್ಯವಿರುವ ಜಮೀನು ಸ್ವಾಧೀನಪಡಿಸಿಕೊಳ್ಳಲು, ಪರಿಹಾರ ಹಣದಲ್ಲಿ ರೈತರಿಗೆ ತಾರತಮ್ಯ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಭೂ ವಿವಾದಕ್ಕೆ ಅವಕಾಶವಿಲ್ಲದಂತೆ ಒಂದೇ ತಾಲೂಕಿಗೆ ಸೀಮಿತವಾಗಿ ಡ್ಯಾಂ ನಿರ್ಮಿಸಲು ಸಾಧ್ಯವಿರುವ ಬಗ್ಗೆಯೂ ತಾಂತ್ರಿಕ ಅಂಶಗಳ ಬಗ್ಗೆ ಸರ್ಕಾರ ಚಿಂತಿಸಿದೆ, ಕಾಮಗಾರಿ ತಡವಾಗಿರುವ ಕಾರಣಕ್ಕೆ 12 ಸಾವಿರ ಕೋಟಿ ರೂ. ಇದ್ದ ಯೋಜನಾ ವೆಚ್ಚ 25 ಸಾವಿರ ಕೋಟಿ ರೂ.ಗೆ ತಲುಪಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.