

ಶಿಕಾರಿಪುರ: ಕರೊನಾ ವೈರಸ್ ಬಗ್ಗೆ ಜನರು ಭಯ ಪಡುವ ಅಗತ್ಯವಿಲ್ಲ. ಆದರೆ ಜಾಗ್ರತೆಯಾಗಿರಬೇಕು. ಸರ್ಕಾರದ ಸೂಚನೆಯಂತೆ ನಡೆದುಕೊಳ್ಳಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ, ವಿವಿಧ ಸಂಸ್ಥೆಗಳು, ಆರೋಗ್ಯ ಇಲಾಖೆ, ಉಳಿದ ಇಲಾಖೆಗಳು ಕರೊನಾ ವೈರಸ್ ವಿರುದ್ಧ ಜನಾಂದೋಲನ ರೂಪಿಸಲು ಸಾಕಷ್ಟು ಶ್ರಮ ವಹಿಸಿವೆ. ಅವರೊಂದಿಗೆ ನಾವೂ ಕೈ ಜೋಡಿಸಬೇಕು. ತಾಲೂಕಿನಲ್ಲಿ ಸೋಂಕಿತರು ಪತ್ತೆಯಾಗಿಲ್ಲ. ದೇಶದ ಸಂಕಷ್ಟದಲ್ಲಿ ಅನಗತ್ಯ ಕಾರ್ಯಕ್ರಮಗಳನ್ನು ಮುಂದೂಡಿ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಕರೊನಾದಿಂದ ಇಡೀ ವಿಶ್ವದ ಆರೋಗ್ಯ ಮತ್ತು ಆರ್ಥಿಕ ವಲಯದ ಮೇಲೆ ಭೀಕರವಾದ ಪರಿಣಾಮಗಳಾಗಿವೆ. ಮೊದಲನೇ ಹಾಗೂ ಎರಡನೇ ಯುದ್ಧ ನಡೆದಾಗಲೂ ಜಗತ್ತು ಈ ಪರಿಯಲ್ಲಿ ತಲ್ಲಣಗೊಂಡಿರಲಿಲ್ಲ ಅನಿಸುತ್ತಿದೆ. ಇದರ ಹರಡುವಿಕೆಯಿಂದ ವಿಶ್ವ ನಾಯಕರಲ್ಲಿ ಆತಂಕ ಉಂಟಾಗಿದೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದಲ್ಲಿ ಈ ಮಹಾಮಾರಿ ಕಂಡಾಗಲೇ ನಮ್ಮ ದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು.
ದೇಶದಲ್ಲಿ 15,000ಕ್ಕೂ ಹೆಚ್ಚು ಸ್ಪೆಷಲ್ ವಾರ್ಡ್ ತೆರೆಯಲಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಿದ್ದು ರೈಲು ಸೇವೆ ಬಂದ್ ಮಾಡಲಾಗಿದೆ. ಜನತಾ ಕರ್ಫ್ಯೂಗೆ ಜನತೆ ಸ್ಪಂದಿಸಿದ ರೀತಿ ಅದ್ಭುತ ಎಂದು ವಿಶ್ಲೇಷಿಸಿದರು.
ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಮೋಹನ್, ಸಹಕಾರಿ ಧುರೀಣ ಎಂ.ಬಿ.ಚನ್ನವೀರಪ್ಪ, ಟಿಎಚ್ಒ ಡಾ. ಚಂದ್ರಪ್ಪ, ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಹಿರಿಯ ಆರೋಗ್ಯ ಸಹಾಯಕ ರಾಜ್ಕುಮಾರ್, ಆರೋಗ್ಯ ಇಲಾಖೆಯ ಪೂಜಾರ್ ಪಾಂಡು ಇತರರಿದ್ದರು.