

ಕಲಬುರಗಿ: ಭಾರತದಲ್ಲಿ ಕೋವಿಡ್-19 ರಣಕೇಕೆ ಮುಂದುವರಿದಿದೆ. ಕಲಬುರಗಿಯಲ್ಲಿ 400ಕ್ಕೂ ಹೆಚ್ಚು ಜನ ಕರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ಕರೊನಾ ಲ್ಯಾಬ್ ಟೆಸ್ಟ್ ಸ್ಥಾಪಿಸಲು ನಿರ್ಧರಿಸಿದೆ ಎéದು ಎಚ್ಕೆಇ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ತಿಳಿಸಿದ್ದಾರೆ.
ಕರೊನಾ ನಿಯಂತ್ರಿಸಲು ರೋಗ ಪತ್ತೆ ಮಾಡಬೇಕು, ಪತ್ತೆ ಮಾಡಲು ಆರ್ಟಿ-ಪಿಸಿಆರ್ ಯಂತ್ರದ ಅವಶ್ಯಕತೆ ಇದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕರೊನಾ ರೋಗ ಪತ್ತೆ ಹಚ್ಚುವದಕ್ಕಾಗಿ ಸರ್ಕಾರ ಗುಲ್ಬರ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಜಿಮ್ಸ್) ನಲ್ಲಿ ಯಂತ್ರ ಸ್ಥಾಪಿಸಲಾಗಿದೆ. ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಗೆ ಇನ್ನೂ ಈ ಯಂತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಿವೆ. ಇದನ್ನು ಮನಗಂಡು ಹೈ.ಕ.ಶಿ. ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಮತ್ತು ಆಡಳಿತ ಮಂಡಳಿಯ ಎಲ್ಲ ಸದಸ್ಯರು ಕಲಬುರಗಿ ಜನತೆಗೆ ಸಿಹಿ ಸುದ್ದಿ ಕೊಡಲು ಮುಂದಾಗಿದ್ದಾರೆ, ಕೋವಿಡ್-19 ಮಹಾಮಾರಿ ಮತ್ತು ಕ್ಷಯ, ಎಚ್ಐವಿ, ಹೆಪೆಟೆಟಿಸ್-ಬಿ ಮತ್ತು ಹೆಪೆಟೆಟಿಸ್-ಸಿ ಅಂತಹ ಮಾರಕ ಸಾಂಕ್ರಾಮಿಕ ರೋಗ ನಿರ್ಣಯಿಸುವ ಮತ್ತು ದೃಢೀಕರಿಸಲು ಆರ್ಟಿ- ಪಿಸಿಆರ್ನಂತಹ ಪರೀಕ್ಷೆಯ ಉಪಕರಣ ಹೊಂದಿದ, ಅತ್ಯಾಧುನಿಕ ತಂತ್ರಜ್ಞಾನದ ಮೊಲಿಕ್ಯೂಲರ ಪ್ರಯೋಗಾಲಯವನ್ನು ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರತಿಸ್ಠಾಪಿಸಲು ಉದ್ದೇಶಿಸಲಾಗಿದೆ.
ಸಂಸ್ಥೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಿದೆ. ಸಂಸ್ಥೆಯ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜಿನ ವೈದ್ಯರು ಕರೊನಾ ವಾರಿಯರ್ಸ್ಗಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜ್ ಕರೊನಾ ನಿಯಂತ್ರಣ ಉಪಕರಣ ಸಿದ್ದಪಡಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಅಮೆರಿಕ ಥರ್ಮೊಫಿಶರ್ ಸೈಂಟಿಫಿಕ್ ಎಂಬ ಕಂಪನಿಗೆ ಸುಮಾರು 1.15 ಕೋಟಿ ರೂ.ಮೌಲ್ಯದ ಯಂತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, 2-3 ವಾರಗಳಲ್ಲಿ ಐಸಿಎಂಆರ್ನಿಂದ ಅನುಮತಿ ಪಡೆದು ಮೊಲಿಕ್ಯುಲಾರ್ ಪ್ರಯೋಗಾಲಯ ಪ್ರಾರಂಭಿಸಲಾಗುವುದು.
ಭೀಮಾಶಂಕರ ಬಿಲಗುಂದಿ ಅಧ್ಯಕ್ಷ
ಎಚ್ಕೆಇ ಸಂಸ್ಥೆ ಕಲಬುರಗಿ