

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ವೈರಸ್ ಕುರಿತು ವದಂತಿಗಳು ಹರಡುತ್ತಿವೆ. ಜನಜಾಗೃತಿ ಕಾರ್ಯಗಳು ಸೂಚನಾಫಲಕ ಮತ್ತು ಕರಪತ್ರಗಳಿಗೆ ಸೀಮಿತವಾಗಬಾರದು ಎಂದು ಬೆಂಗಳೂರು ಗ್ರಾಮಾಂತರ ಜಿಪಂ ಸಿಇಒ ಎನ್.ಎಂ.ನಾಗರಾಜ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೊನಾ ನಿಯಂತ್ರಣ ಕುರಿತು ಖಾಸಗಿ ಮತ್ತು ಸರ್ಕಾರಿ ವೈದ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಜಿಲ್ಲೆಯಲ್ಲಿ ಕರೊನಾ ವೈರಸ್ ನಿಯಂತ್ರಣ ಕುರಿತು ಮಾಹಿತಿ ಶಿಕ್ಷಣ ಮತ್ತು ಸಂವಹನ(ಐ.ಇ.ಸಿ) ಚಟುವಟಿಕೆಗಳ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕರೊನಾ ವೈರಸ್ ಸೋಂಕು ಅಂಕಿ-ಅಂಶಗಳು ಮತ್ತು ಅವಶ್ಯಕ ಎಚ್ಚರಿಕಾ ಕ್ರಮಗಳ ಪ್ರತಿಯೊಂದರ ಮಾಹಿತಿ ಕೇಂದ್ರ ಸರ್ಕಾರದ ಶಿಷ್ಠಾಚಾರದಡಿಯಲ್ಲಿಯೇ ರಾಜ್ಯ ಸರ್ಕಾರ ತಿಳಿಸುತ್ತದೆ. ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಗಳು ಹಾಗೂ ಜನರಲ್ಲಿ ಆತಂಕ ಸೃಷ್ಟಿಸುವ ಸಂದೇಶಗಳನ್ನು ನಂಬಬೇಡಿ ಎಂದು ಹೇಳಿದರು. ಸರ್ಕಾರಗಳು ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸೋಂಕು ಪೀಡಿತರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಡ್ಡಾಯ ತಪಾಸಣೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಮಾತನಾಡಿ, ಸಾರ್ವಜನಿಕರು ಸಾಮಾನ್ಯ ಕೆಮ್ಮು ನೆಗಡಿಗೆ ಭಯಪಡದೆ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಹಾಗೂ ಇತ್ತೀಚಿಗೆ ವಿದೇಶಿ ಸ್ಥಳಗಳಿಗೆ ಭೇಟಿ ಕೊಟ್ಟು ಬಂದ ಭಾರತೀಯರು ಮತ್ತು ವಿದೇಶಿ ಪ್ರವಾಸಿಗರು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಬೇಕು ಎಂದರು.
ಕರೋನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಾಗಿದ್ದು, ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಸೋಂಕಿತ ಲಕ್ಷಣವಾಗಿರುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ, ವೈಯಕ್ತಿಕ ಸ್ವಚ್ಛತೆ ಇಲ್ಲದೆ ಮೂಗು ಬಾಯಿ ಹೇಗೆಂದರೆ ಹಾಗೆ ಮುಟ್ಟಿಕೊಳ್ಳುವುದರಿಂದ, ಸೋಂಕಿತ ವ್ಯಕ್ತಿಯ ಹಸ್ತಲಾಘವ ಮತ್ತು ಮುಟ್ಟುವಾಗ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ ಸ್ವಚ್ಛಗೊಳಿಸಲು ಸುರಕ್ಷಿತವಲ್ಲದ ಕೈಗಳಿಂದ ಅದನ್ನು ಮುಟ್ಟುವುದರಿಂದ ಸೋಂಕು ಹರಡಬಹುದೆಂದು ತಿಳಿಸಿದರು.
ಪ್ರಯೋಗಾಲಯದಲ್ಲಿ ದೃಢ: ಕರೋನಾ ವೈರಸ್ ಸೋಂಕಿತ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಡಿಸಲಾಗುತ್ತದೆ. ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಅಥವಾ ಮಾಸ್ಕ್ ಬಾಯಿಗೆ ಅಡ್ಡ ಹಿಡಿಯುವುದರ ಮೂಲಕ ಮತ್ತು ನಿಮ್ಮ ಕೈಯನ್ನು ಸಾಬೂನಿನಿಂದ ಚೆನ್ನಾಗಿ ಆಗಾಗ ತೊಳೆದುಕೊಳ್ಳುವ ಮೂಲಕ ಸರಳ ವೈಯಕ್ತಿಕ ನೈರ್ಮಲ್ಯ ಅಭ್ಯಾಸ ಮಾಡಿಕೊಳ್ಳಬೇಕು. ಕೆಮ್ಮು ಮತ್ತು ನೆಗಡಿ ಇತ್ಯಾದಿ ಅನಾರೋಗ್ಯದ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಮಾಡದಿರುವುದು. ಬೇಯಿಸದ ಮಾಂಸ, ಮೊಟ್ಟೆ ಸೇವನೆ ಮಾಡದಿರುವುದು ಅವಶ್ಯ. ಕರೊನಾ ರೋಗಕ್ಕೆ ಚಿಕಿತ್ಸೆ ಇರುವುದಿಲ್ಲವಾದ್ದರಿಂದ ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ವೈರಸ್ ಕುರಿತು ಭಯ ಪಡದೆ, ಅಗತ್ಯ ಎಚ್ಚರ ವಹಿಸಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದೆಂದು ವೈಧ್ಯಾಧಿಕಾರಿ ತಿಳಿಸಿದರು.
ರಾಜ್ಯ ಸರ್ವೇಕ್ಷಣಾಧಿಕಾರಿ ಡಾ.ಪುಷ್ಪಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಮಲೇರಿಯಾ ಅಧಿಕಾರಿ ಡಾ.ಧರ್ಮೇಂದ್ರ ಮತ್ತಿತರರು ಇದ್ದರು.