

ತ್ಯಾಮಗೊಂಡ್ಲು: ಲಾಕ್‌ಡೌನ್ ಹಿನ್ನೆಲೆ ಜೀವದ ಹಂಗು ತೊರೆದು ಕರ್ತವ್ಯ ನಿಷ್ಠೆ ಮೆರೆದ ಕರೊನಾ ವಾರಿಯರ್ಸ್‌ಗಳಿಗೆ ಎಷ್ಟು ಗೌರವ ಸೂಚಿಸಿದರೂ ಕಡಿಮೆಯೆ ಎಂದು ಆರ‌್ಯವೈಶ್ಯ ಮಹಾಮಂಡಳಿ ನಿರ್ದೇಶಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ದೇವರಾಜ ಮೊದಲಿಯಾರ್ ಸರ್ಕಲ್‌ನಲ್ಲಿ ತ್ಯಾಮಗೊಂಡ್ಲು ನಾಗರಿಕರ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ವಾರಿಯರ್ಸ್‌ಗಳಾದ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಇಲಾಖೆ, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು, ಗ್ರಾಪಂ ಸಿಬ್ಬಂದಿ, ಪತ್ರಕರ್ತರು, ಪತ್ರಿಕಾ ವಿತರಕರು ಹಾಗೂ ವಿದ್ಯುತ್ ಇಲಾಖೆ ಸೇರಿ ಇತರ ಇಲಾಖೆ ಸುಮಾರು 120 ಸಿಬ್ಬಂದಿಗೆ ಸನ್ಮಾನಿಸಿ ಮಾತನಾಡಿದರು.
ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಲಾಕ್‌ಡೌನ್ ಸಡಿಲಿಕೆ ಆಗುವವರೆಗೂ ಭೋಜನದ ತಯಾರಿಕೆಯನ್ನು ಯಶಸ್ವಿಯಾಗಿ ಮಾಡಿದ ಕಾರ್ಯಕರ್ತರಿಗೂ ಗೌರವ ಸೂಚಕವಾಗಿ ತ್ಯಾಮಗೊಂಡ್ಲುವಿನ ನಾಗರಿಕರಿಂದ ಗೌರವ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಪಟ್ಟಣದ ಮುಖ್ಯರಸ್ತೆಯಲ್ಲಿ ಕರೊನಾ ವಾರಿಯರ್ಸ್‌ಗಳನ್ನು ಮೆರವಣಿಗೆ ಮಾಡಿ ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿದರು.
ಸ್ವಗ್ರಾಮ ಭೈರನಾಯಕನಹಳ್ಳಿಗೆ ಹೊರಟಿದ್ದ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಕಾರ್ಯಕ್ರಮ ಗಮನಿಸಿ ಬಂದು ಕರೊನಾ ವಾರಿಯರ್ಸ್‌ಗಳಿಗೆ ಅಭಿನಂದನೆ ಸಲ್ಲಿಸಿದರು.
ಆರ‌್ಯವೈಶ್ಯ ಸಂಘದ ಅಧ್ಯಕ್ಷ ಆರ್.ಎಸ್.ಅನಿಲ್‌ಕುಮಾರ್, ಜಿಪಂ ಮಾಜಿ ಸದಸ್ಯ ಕುಮಾರಸ್ವಾಮಿ ಮೊದಲಿಯಾರ್, ಎನ್.ಆರ್.ಹೊನ್ನಸಿದ್ದಯ್ಯ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಗುರುಪ್ರಕಾಶ್, ವಿಎಸ್ಸೆಸ್ಸೆನ್ ಅಧ್ಯಕ್ಷ ಟಿ.ಎನ್.ಹನುಮಂತರಾಜು ಮತ್ತಿತರರಿದ್ದರು.