ಕರೊನಾ ವಾರಿಯರ್ ನರ್ಸ್ ಮೇಲೆ ಹಲ್ಲೆ

kerur lady
Published on

ಬಾಗಲಕೋಟೆ: ‘ಕರೊನಾ ಲಕ್ಷಣಗಳಿವೆ ಕ್ವಾರಂಟೈನ್ ಆಗಿ ಮನೆಯಲ್ಲಿಯೇ ಇರಿ. ಹೊರಗೆ ಬರಬೇಡಿ’ ಎಂದು ಕರೊನಾ ವಾರಿಯರ್ ನರ್ಸ್ ಹೇಳಿದ್ದನ್ನೇ ಕಾರಣವಾಗಿಟ್ಟುಕೊಂಡು, ನಮ್ಮ ಮರ್ಯಾದೆ ಹಾಳು ಮಾಡಿದೆ ಎಂದು ರೊಚ್ಚಿಗೆದ್ದು ಗುಂಪುಕಟ್ಟಿಕೊಂಡು ಆಕೆಯ ಮೇಲೆ ಹಲ್ಲೆ ಮಾಡಿದ ಘಟನೆ ಬಾದಾಮಿ ತಾಲೂಕಿನ ಹೊಸಕೋಟೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಹೊಸಕೋಟೆ ಗ್ರಾಮದ ಇಂದ್ರವ್ವ ಎಂಬುವವರಿಗೆ ಕೋವಿಡ್ ಲಕ್ಷಣ ಕಂಡು ಬಂದ ಹಿನ್ನೆಲೆ ಅವರಿಗೆ ಕ್ವಾರಂಟೈನ್ ಇರಲು ಸೂಚಿಸಲಾಗಿತ್ತು. ಬಳಿಕ ತಪಾಸಣೆಯ ವೇಳೆ ನೆಗೆಟಿವ್ ಬಂದಿತ್ತು. ಇದರಿಂದ ರೊಚ್ಚಿಗೆದ್ದ ಕುಟುಂಬದವರು ಊರಿನಲ್ಲಿ ನಮ್ಮ ಮರ್ಯಾದೆ ಹಾಳು ಮಾಡಿದೆ ಎಂದು ಆರೋಪಿಸಿ ಕರೊನಾ ವಾರಿಯರ್ ಕೆರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರಕಾರಿ ಮಹಿಳಾ ಕಿರಿಯ ಆರೋಗ್ಯ ಸಹಾಯಕಿ ರಾಜೇಶ್ವರಿ ಮ್ಯಾಗಿನಮನಿ (47) ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ.
ಜೊತೆಗೆ ರಾಜೇಶ್ವರಿ ಕುಟುಂಬದವರು ಹಲ್ಲೆ ಮಾಡುವುದನ್ನು ವಿಡಿಯೋ ಮಾಡಿದರು ಎಂದು ಕೋಪಗೊಂಡು ಅವರ ಮೇಲೂ ಕೋಲಿನಿಂದ ಹಲ್ಲೆಗೆ ಮುಂದಾದರು ಎಂದು ಆರೋಪಿಸಲಾಗಿದೆ.
ಘಟನೆಯಿಂದ ನರ್ಸ್ ರಾಜೇಶ್ವರಿಯವರು ಅಸ್ವಸ್ಥಗೊಂಡಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರವ್ವ ಅರಹುಣಶಿ, ಪರಶುರಾಮ ನಾಯ್ಕರ್, ದೇವಕೆವ್ವ ನಾಯ್ಕರ್, ಗೋಪಾಲ ನಾಯ್ಕರ್ ಎಂಬುವವರ ವಿರುದ್ಧ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net