ಕರೊನಾ ರೋಗ ಎಚ್1ಎನ್1ಗಿಂತಲೂ ಚಿಕ್ಕದು

7bdvt1
Published on

ಭದ್ರಾವತಿ: ಕರೊನಾ ವೈರಸ್ ರೋಗ ಎಚ್1ಎನ್1 ಕಾಯಿಲೆಗಿಂತಲೂ ಸಣ್ಣ ಪ್ರಮಾಣದ ಕಾಯಿಲೆಯಾಗಿದ್ದು ಸಾಯುವವರ ಸಂಖ್ಯೆಯೂ ಕಡಿಮೆ. ಈ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ. ಇರ್ಫಾನ್ ಅಹಮದ್ ಹೇಳಿದರು.

ನಗರದ ಕೆಎಸ್​ಆರ್​ಟಿಸಿ ಡಿಪೋ ಆವರಣದಲ್ಲಿ ಜಿಲ್ಲಾ ಆಸ್ಪತ್ರೆ, ರೋಟರಿ ಕ್ಲಬ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಜಂಟಿಯಾಗಿ ಆಯೋಜಿಸಿದ್ದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ಸ್ವಚ್ಛತಾ ಆಂದೋಲನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಕರೊನಾ ಕಾಯಿಲೆಯೂ ಇಲ್ಲ, ರೋಗ ಬಾಧಿತ ಸಂಶಯಾಸ್ಪದ ಪ್ರಕರಣಗಳೂ ಪತ್ತೆ ಆಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೆಗಡಿ, ಕೆಮ್ಮು, ಮೈಕೈ ನೋವು, ಜ್ವರದಂತಹ ಲಕ್ಷಣಗಳು ಈ ಕಾಯಿಲೆಯ ಲಕ್ಷಣಗಳಾಗಿದ್ದು ನಮ್ಮ ಕೈಗಳು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಆಗಾಗ ಕೈಗಳನ್ನು ತೊಳೆದುಕೊಳ್ಳುವುದು. ಕೈ ಅಡ್ಡ ಹಿಡಿದು ಸೀನುವುದು ಇಲ್ಲವೆ ಟಿಶ್ಯು ಪೇಪರ್ ಅನ್ನು ಬಳಸುವುದು ಮಾಡಿದರೆ ಕರೊನಾದಿಂದಷ್ಟೆ ಅಲ್ಲ ಎಲ್ಲ ಕಾಯಿಲೆಗಳಿಂದಲೂ ದೂರ ಉಳಿಯಬಹುದು. ಜನಸಾಮಾನ್ಯರಿಗೆ ಮಾಸ್ಕ್​ಗಳ ಅವಶ್ಯಕತೆ ಇಲ್ಲ. ಸಣ್ಣ ಮಕ್ಕಳು ಹಾಗೂ ರೋಗಿಗಳನ್ನು ಪರೀಕ್ಷಿಸುವ ವೈದ್ಯರು, ನರ್ಸಗಳಿಗೆ ಮಾತ್ರ ಅವಶ್ಯಕ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ಮಲ್ಲಪ್ಪ ಮಾತನಾಡಿ, ಕರೊನಾ ವೈರಸ್ ಪ್ರಾಣಿಗಳಲ್ಲಿ ಕಂಡು ಬರುವ ವೈರಸ್ಸಾಗಿದೆ. ಹಸುಗಳು, ಬಾವಲಿಗಳು, ಒಂಟೆ, ಬೆಕ್ಕುಗಳಲ್ಲಿ ಮಾತ್ರ ಕಂಡು ಬರುತ್ತಿತ್ತು. ಆದರೆ ಈಗ ಮನುಷ್ಯನಲ್ಲಿ ಕಂಡು ಬಂದಿದೆ. ಇದು ಗಾಳಿಯಲ್ಲಿ ಹರಡುವ ಕಾಯಿಲೆಯಲ್ಲ. ಮಾಸ್ಕ್ ಹಾಕಿಕೊಳ್ಳುವ ಅಗತ್ಯವಿಲ್ಲ. ಸಾರ್ವಜನಿಕರು ನಿರಾತಂಕದಿಂದಿರಿ ಎಂದು ಸಲಹೆ ನೀಡಿದರು.

ಡೆಟಾಲ್ ಮೂಲಕ ಬಸ್​ಗಳ ಸ್ವಚ್ಛತೆ: ಕೆಎಸ್​ಆರ್​ಟಿಸಿ ಘಟಕದ ವ್ಯವಸ್ಥಾಪಕಿ ಡಿ.ಎನ್.ಅಂಬಿಕಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರೊನಾ ಕಾಯಿಲೆ ಬಗ್ಗೆ ವಾಹನ ಚಾಲಕರು ಹಾಗೂ ನಿರ್ವಾಹಕರಿಗೆ ಅರಿವು ಮೂಡಿಸುವ ಕಾರ್ಯ ಅವಶ್ಯಕವಾಗಿದ್ದು ಕಾರ್ಯಕ್ರಮದಿಂದ ಸಾಕಷ್ಟು ಅನುಕೂಲಕರವಾಗಿದೆ. ಕಾಯಿಲೆಯ ಮುನ್ನೆಚ್ಚರಿಕೆಯ ಕ್ರಮವಾಗಿ ಇಲ್ಲಿನ ಘಟಕದಿಂದ ಹೊರಡುವ ಎಲ್ಲ ಬಸ್ಸುಗಳನ್ನು ಡೆಟಾಲ್ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ. ಚಾಲಕರು ಹಾಗೂ ನಿರ್ವಾಹಕರ ಆರೋಗ್ಯ ರಕ್ಷಣೆ ಇಲಾಖೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ, ನೀಲೇಶ್ ರಾಜ್, ಸುಂದರ್ ಬಾಬು, ನಾಗೇಶ್, ಅಡವೀಶಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net