ಕರೊನಾ ಮಧ್ಯೆ ಕೌಶಲ ಬೆಳೆಸಿಕೊಳ್ಳಿ

IMG-20200921-WA0023
Published on

ಬೀದರ್: ಕರೊನಾ ಸೃಷ್ಟಿಸಿರುವ ಸಮಸ್ಯೆ, ಸವಾಲುಗಳ ನಡುವೆಯೂ ಐಟಿಐ ತರಬೇತಿದಾರರು ತಮ್ಮ ತಮ್ಮ ವೃತ್ತಿಗಳಲ್ಲಿ ಪ್ರಾವೀಣ್ಯತೆ ಪಡೆಯುವ ಜತೆಗೆ ಕೌಶಲ ಬೆಳೆಸಿಕೊಳ್ಳುವಂತೆ ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಹೇಳಿದರು.

ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಐಟಿಐ ತರಬೇತಿದಾರರ ಕರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕರೊನಾ ಬಗ್ಗೆ ಭಯಪಡುವುದಕ್ಕಿಂತ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ಎಲ್ಲ ತರಬೇತಿದಾರರಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ಮಾಡಿದ ಖಾಸಗಿ ಆಸ್ಪತ್ರೆಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಸಿ.ಆನಂದರಾವ ಮಾತನಾಡಿ, ಕರೊನಾಗಿಂತ ಇಂದು ಅದರ ಭಯದಿಂದ ಹೆಚ್ಚು ಜನ ಜೀವ ಕಳೆದುಕೊಳ್ಳುತ್ತಿರುವುದು ವಿಷಾದಕರ. ಭಯದಿಂದ ಕರೊನಾ ಸೋಲಿಸಲಾಗದು. ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಕೆ ಜತೆ ಪರಸ್ಪರ ಅಂತರ ಕಾಪಾಡಬೇಕು. ದಿನವೂ ನಿಂಬೆ ರಸ, ಎಳೆ ನೀರು, ಹೆಚ್ಚಿನ ತರಕಾರಿ, ಹಣ್ಣು ತಿಂದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಕರೊನಾ ಅಪಾಯ ತಾನಾಗಿಯೇ ಕಮ್ಮಿಯಾಗುತ್ತದೆ ಎಂದು ತಿಳಿಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿ, ಬಡ ಮಕ್ಕಳ ಹಿತದಿಂದ ನಿರಂತರ ಕ್ಯಾಂಪಸ್ ಸಂದರ್ಶನ ಮಾಡಲಾಗುತ್ತಿದೆ. ಸರ್ಕಾರದ ಆದೇಶದಂತೆ ಸಂಸ್ಥೆ ಪುನರಾರಂಭ ಮಾಡಲಾಗಿದೆ. ನವೆಂಬರ್ ತಿಂಗಳಲ್ಲಿ ಪರೀಕ್ಷೆಗಳಿವೆ. ವಿದ್ಯಾರ್ಥಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಸಂಸ್ಥೆ ಆಡಳಿತಾಧಿಕಾರಿ ಪ್ರಕಾಶ ಜನವಾಡಕರ, ಅಧೀಕ್ಷಕ ಸುದರ್ಶನಕುಮಾರ ಮಂಗಲಗಿಕರ್ ಅವರು ಉಪಯುಕ್ತ ಮಾಹಿತಿಗಳನ್ನು ತರಬೇತಿದಾರರಿಗೆ ನೀಡಿದರು. ಪತ್ರಕರ್ತ ನಾಗಶೆಟ್ಟಿ ಧರಂಪುರ ಸಾಂಸ್ಕೃತಿಕ ಗೀತೆಗಳನ್ನು ಹಾಡಿದರು. ಯುಸೂಫ್ಮಿಯಾ ಜೋಜನಾ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಣೆ ಮಾಡಿದರು. ಕರೊನಾ ಗೆದ್ದು ಬಂದ ವಿರೂಪಾಕ್ಷ ಗಾದಗಿ ಅವರನ್ನು ಗೌರವಿಸಲಾಯಿತು.

ಮುಂಜಾಗ್ರತಾ ಕ್ರಮ ಪಾಲಿಸಿದರೆ ಕರೊನಾದಿಂದ ದೂರ ಇರಬಹುದು. ನನಗೆ ಸೋಂಕು ಅಂಟಿತ್ತು. ವಾರದೊಳಗೆ ಗುಣಮುಖ ಆಗಿರುವೆ. ಕರೊನಾಗೆ ಭಯಪಡುವ ಬದಲು ಸೂಕ್ತ ಚಿಕಿತ್ಸೆ, ಆತ್ಮವಿಶ್ವಾಸದಿಂದ ಸೋಲಿಸಬಹುದು.| ವಿರೂಪಾಕ್ಷ ಗಾದಗಿಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net