

ಗದಗ: ಸೋಮವಾರ ಮದ್ಯಪ್ರಿಯರಿಗೆ ಹಬ್ಬವೋ ಹಬ್ಬ. ಕರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಮದ್ಯ ಮಾರಾಟ ಮತ್ತೆ ಆರಂಭವಾಗಿದ್ದರಿಂದ ಮದ್ಯ ಪ್ರಿಯರು ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು. ಜಿಲ್ಲೆಯ ಪ್ರತಿ ಮದ್ಯದ ಅಂಗಡಿಯ ಮುಂದೆಯೂ ಜನವೋ ಜನ. ಮದ್ಯ ಖರೀದಿಗಾಗಿ ಜನರು 100-300 ಮೀಟರ್ನಷ್ಟು ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು.
ಸೋಮವಾರದಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ್ದರಿಂದ ಮದ್ಯದಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಕಂಬಗಳನ್ನು ಹಾಕಿ ವ್ಯವಸ್ಥೆ ಮಾಡಿದ್ದರು. ಪ್ರತಿ ಮದ್ಯದಂಗಡಿ ಮುಂದೆ ಸ್ಯಾನಿಟೈಸರ್ ಇಟ್ಟಿದ್ದರು. ಪ್ರತಿಯೊಬ್ಬರಿಗೆ ಸರ್ಕಾರ 2.3 ಲೀಟರ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ 18 ಲೀಟರ್ ಬಿಯರ್ ಖರೀದಿಸಲು ಅವಕಾಶ ನೀಡಿತ್ತು. ಕಳೆದ 42 ದಿನಗಳಿಂದ ಮದ್ಯ ಇಲ್ಲದೆ ಕಂಗಾಲಾಗಿದ್ದ ಬಹುತೇಕ ಜನರು ಮದ್ಯ ಖರೀದಿಸಿ ಖುಷಿಯಿಂದಲೇ ತೆಗೆದುಕೊಂಡು ಹೋದರು. ಸಾಮರ್ಥ್ಯ ಅನುಸಾರವಾಗಿ ಜನರು ಮದ್ಯ ಖರೀದಿಸಿದರು. ಕೆಲವೆಡೆ ಕುಡುಕರು ಅಂಗಡಿಯಿಂದ ಹೊರಬಂದು ಅಲ್ಲಿಯೇ ಕುಡಿದು ತೂರಾಡಿದ್ದು ಕಂಡು ಬಂದಿತು. ಕೆಲವರು ಕುಡಿದು ಹಾಡಿದರು, ನ್ಯತ್ಯ ಮಾಡಿದರು, ಜೈಕಾರ ಕೂಗಿದರು, ಕರೊನಾ ಬೇಗನೆ ತೊಲಗಲಿ, ನಮಗೆ ನಿತ್ಯವೂ ಮದ್ಯ ಸಿಗಲಿ ಎಂದು ಹಾರೈಸಿದರು. ಕೆಲ ಅಂಗಡಿಗಳಿಗಲ್ಲಿ ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಮಾಲು ಖಾಲಿ ಆಗಿ ಬಾಗಿಲು ಹಾಕಲಾಯಿತು.
ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲಾದ್ಯಂತ ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ಆದರೆ, ಜನರು ಬೆಳಗ್ಗೆ 7ಕ್ಕೆ ಬಂದು ಮದ್ಯದಂಗಡಿಯ ಮುಂದೆ ಸರದಿಯಲ್ಲಿ ನಿಂತಿದ್ದರು. ಮಧ್ಯಾಹ್ನ ಉರಿ ಬಿಸಿಲು ಲೆಕ್ಕಿಸದೆ ಜನರು ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು. ಕೆಲವೆಡೆ ಅನೇಕರು ಅಂತರ ಕಾಪಾಡದೆ ಮದ್ಯ ಖರೀದಿಗೆ ಮುಗಿಬಿದ್ದಿದ್ದರು. ಎಲ್ಲರಿಗೂ ಮದ್ಯ ನೀಡಲಾಗುವುದು, ಪರಸ್ಪರ ಅಂತರ ಕಾಯ್ದುಕೊಳ್ಳಿ ಎಂದು ಎಷ್ಟೇ ತಿಳಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.
67 ಅಂಗಡಿಗಳಲ್ಲಿ ಮಾರಾಟ: ಸರ್ಕಾರ ಎಂಎಸ್ಐಎಲ್ ಮತ್ತು ಸಿಎಲ್2 ಮದ್ಯದಂಗಡಿಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಗದಗ ಜಿಲ್ಲೆಯಲ್ಲಿ 141 ಮದ್ಯದಂಗಡಿಗಳಿದ್ದು, ಇದರಲ್ಲಿ ಎಂಎಸ್ಐಎಲ್ ಮತ್ತು ಸಿಎಲ್2 ಅಂಗಡಿಗಳು 70 ಇದ್ದು, ಇದರಲ್ಲಿ 2 ಅಂಗಡಿಗಳು ಅಮಾನತು ಆಗಿವೆ. 1 ಅಂಗಡಿ ಕಾರಣಾಂತರಗಳಿಂದ ಬಂದ್ ಆಗಿದೆ. ಉಳಿದ 67 ಅಂಗಡಿಗಳು ಮದ್ಯ ಮಾರಾಟ ಮಾಡುತ್ತಿವೆ ಎಂದು ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿ ಮೋತಿಲಾಲ ತಿಳಿಸಿದ್ದಾರೆ.
ಮದ್ಯಪ್ರಿಯರು ಫುಲ್ಖುಷ್: ನರಗುಂದ: ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವ ಸರ್ಕಾರ ನಿರ್ಧಾರಕ್ಕೆ ತಾಲೂಕಿನ ಮದ್ಯಪ್ರಿಯರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಜನರು ಬೆಳಗ್ಗೆ 9 ರಿಂದ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು. ಕೆಲವರು ಮದ್ಯ ಖರೀದಿಸಿ ತಕ್ಞಣ ನಿರ್ಜನ ಪ್ರದೇಶಗಳಿಗೆ ತೆರಳಿ ನಶೆಯೇರಿಸಿಕೊಂಡು ಖುಷಿಪಟ್ಟರು.
ಕೆಲವರು ಪರಸ್ಪರ ಸಂತರ ಕಾಯ್ದುಕೊಳ್ಳದೆ ಮದ್ಯ ಖರೀದಿಸಲು ಮುಂದಾದಾಗ ಸಿಪಿಐ ಡಿ.ಬಿ. ಪಾಟೀಲ ತರಾಟೆಗೆ ತೆಗೆದುಕೊಂಡರು. ಮುಂಜಾಗ್ರತಾ ಕ್ರಮವಾಗಿ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ಡಿ.ಬಿ. ಪಾಟೀಲ ಹಾಗೂ ಅಬಕಾರಿ ನಿರೀಕ್ಷಕಿ ಪದ್ಮಾ ಅವರು ವಿವಿಧ ಮದ್ಯದ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಸುರಪಾನಕ್ಕಾಗಿ ಬೆಳಗ್ಗೆಯಿಂದಲೇ ಪಾಳಿ:
ಶಿರಹಟ್ಟಿ: 40 ದಿನಗಳಿಂದ ಸುರಪಾನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಮದ್ಯ ವ್ಯಸನಿಗಳು ಸೋಮವಾರ ಬೆಳಗಾಗುತ್ತಿದ್ದಂತೆಯೇ ಮದ್ಯದಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಮದ್ಯ ಪಡೆದರು. ಪಟ್ಟಣದ ಎಂಎಸ್ಐಎಲ್ ಸೇರಿ 4 ವೈನ್ಶಾಪ್ ಮತ್ತು ಬೆಳ್ಳಟ್ಟಿ, ಮಾಗಡಿ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡಲಾಯಿತು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಪ್ರತಿಯೊಬ್ಬರೂ ಎಣ್ಣೆ ಖರೀದಿ ಮಾಡಿ ಮುಂದೆ ಹೋಗುವವರೆಗೆ ಮುಖಕ್ಕೆ ಮಾಸ್ಕ್ ಧರಿಸಿದ್ದರು.
ಇಲ್ಲೂ ಸೈ.. ಅಲ್ಲೂ ಜೈ: ಒಬ್ಬ ವ್ಯಕ್ತಿಗೆ ಗರಿಷ್ಠ 2 ಲೀಟರ್ ಮದ್ಯ ನೀಡಬೇಕೆಂದು ಸರ್ಕಾರ ಕಟ್ಟಪ್ಪಣೆ ವಿಧಿಸಿದ್ದರಿಂದ, ಮೊದಲೇ ಕಂಗಾಲಾಗಿದ್ದ ಕೆಲ ಮದ್ಯಪ್ರಿಯರು ತಾವು ಒಂದು ಅಂಗಡಿ ಎದುರು ಸರದಿಯಲ್ಲಿ ನಿಂತರೆ ತಮ್ಮ ಆಪ್ತರನ್ನು ಮತ್ತೊಂದು ಅಂಗಡಿ ಎದುರು ಪಾಳಿಯಲ್ಲಿ ನಿಲ್ಲಿಸಿ ಅಗತ್ಯಕ್ಕಿಂತ ತುಸು ಹೆಚ್ಚು ಮದ್ಯ ಖರೀದಿಸಿದರು.
ಶಿಸ್ತು ಪಾಲಿಸಿದ ಮಧುಪ್ರಿಯರು
ಮುಂಡರಗಿ: ಹಲವಾರು ದಿನಗಳವರೆಗೆ ಮದ್ಯವಿಲ್ಲದೆ ಪರಿತಪಿಸಿದ್ದ ಮದ್ಯಪ್ರಿಯರು ಸೋಮವಾರ ಶಿಸ್ತಿನ ಸಿಪಾಯಿಗಳಂತೆ ಅಂಗಡಿ ಎದುರು ನಿಂತು ಮದ್ಯ ಖರೀದಿಸಿದರು. ಕರೊನಾ ಆತಂಕ ಮರೆತು ಸರದಿ ಸಾಲಿನಲ್ಲಿ ನಿಂತು ಎಣ್ಣೆ ಕೊಂಡೊಯ್ದರು.
ಮೊದಲೇ ಬ್ಯಾರಿಕೇಡ್ ಹಾಕಿ ಮಾರ್ಕ್ಗಳನ್ನು ಮಾಡಿದ್ದರಿಂದ ಯಾವುದೇ ತಳ್ಳಾಟ, ನೂಕಾಟವಿರಲಿಲ್ಲ. ಜತೆಗೆ ಪೊಲೀಸ್ ಸಿಬ್ಬಂದಿಯೂ ಹದ್ದಿನ ಕಣ್ಣಿಟ್ಟಿದ್ದರಿಂದ ಯಾವುದೇ ಅಹಿತಕರ ಘಟನೆ ಆಸ್ಪದವಿರಲಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೂ ಮದ್ಯದ ಅಂಗಡಿಗಳ ಮುಂದೆ ಉದ್ದನೆಯ ಸಾಲು ಕಂಡುಬಂತು. ಪಟ್ಟಣ ಸೇರಿ ತಾಲೂಕಿನಲ್ಲಿ ಒಟ್ಟು 13 ಮದ್ಯದಂಗಡಿಗಳಿದ್ದು ಈ ಪೈಕಿ ಪಟ್ಟಣದ ಎಂಎಸ್ಐಎಲ್, 3 ವೈನ್ ಶಾಪ್ ಮತ್ತು ಹಿರೇವಡ್ಡಟ್ಟಿ ಗ್ರಾಮದ ಎಂಎಸ್ಐಎಲ್ ತೆರೆಯಲು ಅವಕಾಶ ನೀಡಲಾಗಿತ್ತು.
ಜನದಟ್ಟಣೆ ನಿಯಂತ್ರಣಕ್ಕೆ ಖಾಕಿ ಕಣ್ಗಾವಲು
ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣ ಹಾಗೂ ಜಕ್ಕಲಿ ಕ್ರಾಸ್ ಹತ್ತಿರದ ಎರಡು ಸಿಎಲ್-2 ಬಾರ್, ನಿಡಗುಂದಿ ಗ್ರಾಮದ ಎಂಎಸ್ಐಎಲ್ನಲ್ಲಿ ಸೋಮವಾರ ಬೆಳಗ್ಗೆ 9ಗಂಟೆಯಿಂದ ಮದ್ಯಪ್ರಿಯರು ಸರದಿ ಸಾಲಿನಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಮದ್ಯ ಖರೀದಿಸಿದರು. ಮದ್ಯ ಮಾರಾಟಕ್ಕೂ ಮೊದಲು ಅಬಕಾರಿ ಇಲಾಖೆಯ ಸಿಬ್ಬಂದಿ ಅಂಗಡಿಗಳಲ್ಲಿನ ಸ್ಟಾಕ್ಗಳನ್ನು ಪರಿಶೀಲಿಸಿದರು. ಮದ್ಯದಂಗಡಿಗಳ ಮುಂದೆ ಜನದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಏಳು ಗಂಟೆಗೇ ಬಂದು ನಿಂತರು!
ಲಕ್ಷ್ಮೇಶ್ವರ: ಪಟ್ಟಣದಲ್ಲಿಯೂ ಸೋಮವಾರ ಜನರು ಮದ್ಯದ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತ ಮದ್ಯ ಖರೀದಿಸದ ದೃಶ್ಯ ಕಂಡು ಬಂದಿತು. ಸರ್ಕಾರ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದ ಭಾನುವಾರವೇ ಮದ್ಯ ಮಾರಾಟಗಾರರು ಪೂರಕ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸೋಮವಾರ ಬೆಳಗ್ಗೆ 9 ಗಂಟೆಯ ನಂತರ ಅಂಗಡಿ ತೆರೆಯಲಿವೆ ಎಂಬ ಮಾಹಿತಿ ಇದ್ದರೂ ಸಾಕಷ್ಟು ಜನರು 7 ಗಂಟೆಗೇ ಪಾಳಿ ಹಚ್ಚಿದ್ದರು.
ಸರದಿ ಸಾಲಿನಲ್ಲಿ ನಿಂತು ಮದ್ಯ ಪಡೆಯುತ್ತಿರುವ ಜನರಿಗೆ ಸ್ಯಾನಿಟೈಸರ್ ಹಾಕಲಾಗುತ್ತಿತ್ತು. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳ ಮುಂದೆ ಮದ್ಯ ಖರೀದಿಸಲು ಬರುವವರು ಮಾಸ್ಕ್ ಧರಿಸಬೇಕು, 6 ಅಡಿ ಅಂತರ ಕಾಯಬೇಕು ಮತ್ತು ಪಾರ್ಸಲ್ ಮಾತ್ರ ಒಯ್ಯಲು ಅವಕಾಶ ಎಂಬ ಸೂಚನೆಗಳನ್ನು ಮದ್ಯಪ್ರಿಯರು ಚಾಚುತಪ್ಪದೆ ಪಾಲಿಸುವಲ್ಲಿ ಮದ್ಯಪ್ರಿಯರು ನಿಷ್ಠೆ ತೋರಿದರು. ಕೆಲವರು ರಾಜಾರೋಷವಾಗಿ ಸರದಿ ಸಾಲಿನಲ್ಲಿ ನಿಂತರೆ, ಕೆಲವರು ಮುಖ ಕಾಣದಂತೆ ವಸ್ತ್ರ ಧರಿಸಿ ತಲೆ ಬಾಗಿಸಿ ಮದ್ಯ ಖರೀದಿಸಿದರು. ಹೊಸ ಬಸ್ ನಿಲ್ದಾಣದ ಹತ್ತಿರದ ಮದ್ಯದಂಗಡಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಮಹಿಳೆಯರು ಮದ್ಯ ಖರೀದಿಸಿದರು.
ದಿನಸಿ ಸೇರಿ ಇತರೆ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 9 ಗಂಟೆವರೆಗೆ ಮಾತ್ರ ಅವಕಾಶ ನೀಡಿ, ಮದ್ಯ ಮಾರಾಟಕ್ಕೆ ಮಾತ್ರ ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ಅವಕಾಶ ಕಲ್ಪಿಸಿರುವುದು ಮದ್ಯ ವಿರೋಧಿಗಳಿಗೆ ಬೇಸರ ಮೂಡಿಸಿತ್ತು.