

ಹುಬ್ಬಳ್ಳಿ: ಕರೊನಾ ಸೋಂಕು ನಮ್ಮ ದೇಶಕ್ಕೆ ಕಾಲಿಟ್ಟಿರುವುದರಿಂದ ಎಲ್ಲರೂ ಜಾಗೃತಿ ವಹಿಸುವುದು ಅಗತ್ಯ. ಆದರೆ, ಭಯಪಡುವ ಅಗತ್ಯವಿಲ್ಲ ಎಂದು ಹಿರಿಯ ಮಧುಮೇಹ ತಜ್ಞ ಡಾ. ಜಿ.ಬಿ. ಸತ್ತೂರ ಅಭಿಪ್ರಾಯಪಟ್ಟರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ಸ್ ಶೇ. 9ರಷ್ಟು ಇದ್ದರೆ, ಕರೊನಾದ್ದು ಶೇ. 2ರ ಪ್ರಮಾಣವಿದೆ. ಹಾಗಾಗಿ ಆತಂಕ ಪಡಬಾರದು. ಹೋಲಿ ಮಿಲನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿಲ್ಲ. ನಾವೂ ಭಾಗವಹಿಸಬಾರದು. ಏಕೆಂದರೆ, ಸೋಂಕು ಹೀಗೆಯೇ ಹರಡುತ್ತದೆ ಎಂದು ಹೇಳಲಾಗುವುದಿಲ್ಲ. ಬಣ್ಣದಾಟವಾಡುವ ಸಂದರ್ಭದಲ್ಲಿ ನೀರಿನಾಂಶ ಕೊರತೆ, ಕೆಮ್ಮು, ಜ್ವರ ಬಂದ ಅನುಭವವಾಗಬಹುದು. ಅನಗತ್ಯ ಪ್ರವಾಸಗಳನ್ನು ಮೊಟಕುಗೊಳಿಸಬೇಕು. ಎಲ್ಲೆಂದರಲ್ಲಿ ಉಗುಳಬಾರದು ಎಂದು ವಿನಂತಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರೊನಾ ವೈರಸ್ ತಡೆಗೆ ಮಹತ್ವದ ಹೆಜ್ಜೆಗಳನ್ನು ಇಡುತ್ತಿವೆ. ಸೋಂಕಿನ ಲಕ್ಷಣಗಳು ಕಂಡುಬಂದರೆ ಮನೆಯಲ್ಲಿಯೇ ಉಳಿದುಕೊಳ್ಳಬೇಕು. ಕಣ್ಣು, ಕಿವಿ, ಮೂಗು, ಬಾಯಿಗೆ ಕೈ ಹಚ್ಚಬಾರದು. ಸೀನುವಾಗ, ಕೆಮ್ಮುವಾಗ ಮೊಣಕೈ ಕಡೆ ಮುಖ ಮಾಡಬೇಕು ಎಂದು ಸಲಹೆ ನೀಡಿದರು.
ಐಎಂಎ ಹುಬ್ಬಳ್ಳಿ ಅಧ್ಯಕ್ಷ ಡಾ. ಕ್ರಾಂತಿಕಿರಣ, ಕಾರ್ಯದರ್ಶಿ ಡಾ. ಮಂಜುನಾಥ ನೇಕಾರ, ಡಾ. ಶೈಲೇಂದ್ರ, ಡಾ. ಆಶಾ ಪಾಟೀಲ, ಡಾ. ಶ್ರೀನಾಥ ಮುಗಳಿ ಸುದ್ದಿಗೋಷ್ಠಿಯಲ್ಲಿದ್ದರು.