

ಬೆಂಗಳೂರು ಗ್ರಾಮಾಂತರ: ಕರೊನಾ ನಿರ್ವಹಣೆಯಲ್ಲಿ ಯಾವುದೇ ಪಕ್ಷಭೇದ ಮಾಡಬಾರದು. ಯಾವುದೇ ರಾಜಕೀಯಕ್ಕೆ ಆಸ್ಪದ ನೀಡಬಾರದು ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕು ಲಕ್ಕೊಂಡಹಳ್ಳಿ ಗ್ರಾಪಂ ವ್ಯಾಪ್ತಿಯ ವಾಬಸಂದ್ರ, ಲಕ್ಕೊಂಡಹಳ್ಳಿ, ತಿಮ್ಮಸಂದ್ರ, ವೆಂಕಟಾಪುರ, ಹಸಿಗಾಳ, ಕಮ್ಮಸಂದ್ರ, ಸೊಣ್ಣಳ್ಳಿಪುರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜಕೀಯ ಚುನಾವಣೆ ವೇಳೆಗಷ್ಟೇ ಸೀಮಿತವಾಗಬೇಕು. ಅಭಿವೃದ್ಧಿ ವಿಷಯವಾಗಲೀ, ಇಂಥ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಾಗಲೀ ರಾಜಕೀಯ ಮಾಡಬಾರದು. ಜನರ ಜೀವ, ಜೀವನ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಕರೊನಾ ಮೊದಲ ಅಲೆ ವೇಳೆ ಸಾಕಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜನ ಎಚ್ಚೆತ್ತುಕೊಂಡಿದ್ದಾರೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಕರೊನಾ ಮಹಾಮಾರಿ ಕಟ್ಟಿಹಾಕಲು ಇರುವ ರಾಮ ಬಾಣ ಎಂದು ಹೇಳಿದರು.
ಕರೊನಾ ಸಾಕಷ್ಟು ಸಾವು ನೋವಿಗೆ ಕಾರಣವಾಗಿದೆ. ಹೊಸಕೋಟೆ ತಾಲೂಕಿನಲ್ಲೇ ನೂರಾರು ಮಂದಿಯನ್ನು ಕರೊನಾ ಬಲಿಪಡೆದಿದೆ. ಎರಡನೇ ಅಲೆಯಲ್ಲಿ ಸಾಕಷ್ಟು ಯುವಪೀಳಿಗೆ ಬಲಿಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಜ್ಞರು ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಮೈಮರೆಯಬಾರದು ಕರೊನಾ ನಿಯಮ ಕಡೆಗಣಿಸಬಾರದು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸ್ವಂತ ಹಣದಲ್ಲಿ ಲಸಿಕೆ: ಎರಡನೇ ಅಲೆ ವೇಳೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದರಿಂದ ಲಸಿಕೆಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ತಕ್ಷಣಕ್ಕೆ ಎಲ್ಲರಿಗೂ ಲಸಿಕೆ ಸಿಗುವುದು ತಡವಾಗಿದೆ. ಸರ್ಕಾರಗಳು ಲಸಿಕೆ ಉತ್ಪಾದನೆ ಹೆಚ್ಚು ಮಾಡಿ ವಿತರಣೆಗೆ ಎಲ್ಲ ಕ್ರಮ ಕೈಗೊಂಡಿದೆ. ಇದರ ನಡುವೆ ಖಾಸಗಿಯಾಗಿ ಪಡೆಯಲು ಸಾವಿರಾರು ರೂಪಾಯಿ ವೆಚ್ಚವಾಗಲಿದೆ. ಇದು ಬಡವರಿಗೆ ಆರ್ಥಿಕ ಹೊರೆಯಾಗುವ ಕಾರಣ ಮಂಜುನಾಥ ಚಾರಿಟಬಲ್ ಟ್ರಸ್ಟ್‌ನಿಂದ ಗ್ರಾಮೀಣ ಜನರಿಗೆ ಸುಲಭವಾಗಿ ಉಚಿತವಾಗಿ ಲಸಿಕೆ ವಿತರಿಸುವ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.