ಕರೊನಾ ನಿರ್ಬಂಧ 31ರವರೆಗೆ ವಿಸ್ತರಣೆ

19 smg 8
Published on

ಶಿವಮೊಗ್ಗ: ಕರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಲೆನಾಡು ಶಿವಮೊಗ್ಗ ಜಿಲ್ಲೆ ಇನ್ನೊಂದು ವಾರ ಬಹುತೇಕ ಸ್ತಬ್ಧಗೊಳ್ಳಲಿದ್ದು, ಸಭೆ, ಸಮಾರಂಭ, ಮಾಲ್, ಚಿತ್ರಮಂದಿರಗಳ ಮೇಲಿನ ಸಾರ್ವಜನಿಕರ ನಿರ್ಬಂಧ ಅವಧಿಯನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ.

ಈಗಾಗಲೇ ಜಿಲ್ಲಾದ್ಯಂತ ವಿಧಿಸಿದ್ದ ನಿರ್ಬಂಧ ಮಾ.23ಕ್ಕೆ ಅಂತ್ಯಗೊಳ್ಳಲಿದ್ದು ಕರೊನಾ ಆತಂಕ ಎಲ್ಲೆಡೆ ಮನೆ ಮಾಡುತ್ತಿದೆ. ಹಾಗಾಗಿ ನಿರ್ಬಂಧ ಅವಧಿಯನ್ನು ಅನಿವಾರ್ಯವಾಗಿ ಮುಂದೂಡುವ ಸಂದಿಗ್ದತೆ ಜಿಲ್ಲಾಡಳಿತಕ್ಕೆ ಎದುರಾಗಿದ್ದು ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಾರ್ವಜನಿರಲ್ಲಿ ಜಾಗೃತಿ ಮೂಡಿಸುತ್ತಿದೆ. ನಾಲ್ಕೈದು ದಿನಗಳಿಂದ ಶಾಪಿಂಗ್ ಮಾಲ್, ಚಿತ್ರಮಂದಿರಗಳು ಬಂದ್ ಆಗಿವೆ. ಆದರೂ ಕೆಲ ಸಣ್ಣ ಪ್ರಮಾಣದ ಮಾಲ್​ಗಳು, ಅಂಗಡಿಗಳು ಇನ್ನೂ ಮುಂದುವರಿದಿದ್ದು ಸ್ಥಳೀಯ ಜನರಲ್ಲಿ ಆತಂಕ ಉಂಟು ಮಾಡುತ್ತಿದೆ.

ಸ್ಯಾನಿಟೈಜರ್, ಮಾಸ್ಕ್ ನೋ ಸ್ಟಾಕ್: ಶಿವಮೊಗ್ಗ ನಗರ ಸೇರಿ ಜಿಲ್ಲಾದ್ಯಂತ ಸ್ಯಾನಿಟೈಜರ್, ಹ್ಯಾಂಡ್​ವಾಶ್ ಹಾಗೂ ಮಾಸ್ಕ್​ಗಳು ಸಿಗುತ್ತಿಲ್ಲ. ಮೆಡಿಕಲ್​ಗಳು, ದಿನಸಿ ಅಂಗಡಿಗಳಲ್ಲೂ ಮಾಸ್ಕ್, ಸ್ಯಾನಿಟೈಜರ್​ಗಳನ್ನು ಮಾರಾಟ ಮಾಡುತ್ತಿದ್ದು ಜನರಿಂದ ಬೇಡಿಕೆ ಹೆಚ್ಚುತ್ತಿದೆ. ಆದರೆ ಎಲ್ಲ ಕಡೆ ನೋ ಸ್ಟಾಕ್ ಎಂದು ಉತ್ತರ ಸಿಗುತ್ತಿದೆ. ಇದು ಜನರನ್ನು ಮತ್ತಷ್ಟು ಆತಂಕಗೊಳ್ಳುವಂತೆ ಮಾಡುತ್ತಿದೆ. ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸುತ್ತಿರುವ ಕಾರಣ ಸ್ಯಾನಿಟೈಜರ್ ಹಾಗೂ ಮಾಸ್ಕ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಹಳಷ್ಟು ಜನರು ಆತಂಕದಿಂದಲೇ ಖರೀದಿಗೆ ಮುಂದಾಗುತ್ತಿದ್ದಾರೆ. ಈ ನಡುವೆ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಎಲ್ಲೆಡೆ ದಾಳಿ ನಡೆಸುತ್ತಿರುವ ಕಾರಣ ಸ್ಟಾಕ್ ಇದ್ದರೂ ಭಯದಿಂದ ಮೆಡಿಕಲ್, ಅಂಗಡಿಯವರು ವಿತರಣೆಗೆ ಹಿಂದೇಟು ಹಾಕುತ್ತಿದ್ದಾರೆ.

ಬೀದಿ ಬದಿ ಅಂಗಡಿಗಳ ತೆರವಿಲ್ಲ: ಸೋಂಕು ಸಾಂಕ್ರಾಮಿಕವಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವ ಸ್ಥಳಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೂ ನಗರದ ರಸ್ತೆ ಬದಿ ಹೋಟೆಲ್​ಗಳು, ಗೂಡಂಗಡಿಗಳ ತೆರವು ಮಾತ್ರ ಸಾಧ್ಯವಾಗಿಲ್ಲ. ದೊಡ್ಡ ಹೋಟೆಲ್​ಗಳಿಗೆ ಹೋಗುವವರಿಗಿಂತ ರಸ್ತೆ ಬದಿ ಹೋಟೆಲ್​ಗಳಿಗೆ ಜನರು ತೆರಳುವುದು ಸಾಮಾನ್ಯ. ಅಸುರಕ್ಷತೆ ಕಾರಣ ಸ್ಥಳೀಯವಾಗಿ ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ಜಿಪಂ ಅಥವಾ ಮಹಾನಗರ ಪಾಲಿಕೆಯಾಗಲಿ ಯಾವುದೇ ಎಚ್ಚರಿಕೆ ನೀಡದಿರುವುದು ಅಚ್ಚರಿ ಉಂಟು ಮಾಡಿದೆ. ಕರೊನಾ ಸೋಂಕು ಸಾಂಕ್ರಾಮಿಕವಾಗಿರುವ ಕಾರಣ ಬೀದಿ ಬದಿ ಹೋಟೆಲ್​ಗಳನ್ನು ಮೊದಲು ಸ್ಥಗಿತಗೊಳಿಸಬೇಕು. ಈ ಸಂಬಂಧ ಕ್ರಮ ಕೈಗೊಂಡು ಕನಿಷ್ಠ 15 ದಿನ ಬೀದಿಬದಿ ಹೋಟೆಲ್ ಬಂದ್ ಮಾಡಿಸುವಂತೆ ಡಿಸಿ, ಎಸ್ಪಿ ಹಾಗೂ ಸಿಮ್್ಸ ನಿರ್ದೇಶಕರಿಗೂ ಸಂದೇಶ(ಮೇಸೆಜ್)ದ ಮೂಲಕ ಮನವಿ ಮಾಡಿದ್ದೇನೆ. ಆದರೆ ಇದುವರೆಗೂ ರಸ್ತೆ ಬದಿ ಹೋಟೆಲ್ ಹಾಗೂ ಗೂಡಂಗಡಿ ಸ್ಥಗಿತಗೊಳಿಸಿಲ್ಲ ಎನ್ನುತ್ತಾರೆ ಶಿವಮೊಗ್ಗದ ರಘುಪತಿ.

ಮದುವೆ ರದ್ದಾದರೂ ಮುಂಗಡ ಹಣ ಇಲ್ಲ: ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬ ಗಾದೆ ಇನ್ನೂ ಪ್ರಚಲಿತರಲ್ಲಿದೆ. ಆದರೆ ಕರೊನಾ ವೈರಸ್ ಕಾರಣದಿಂದ ಜಿಲ್ಲೆಯಲ್ಲಿ ಅದೆಷ್ಟೋ ಮದುವೆಗಳು, ಸಭೆ, ಸಮಾರಂಭಗಳು ರದ್ದಾಗಿವೆ. ಆದರೆ ನಗರದ ಹಲವು ಕಲ್ಯಾಣ ಮಂದಿರಗಳು ಮದುವೆಗೆ ಮುಂಗಡ ಪಾವತಿಸಿದ್ದ ಲಕ್ಷಾಂತರ ರೂ. ಹಣ ನೀಡಲು ಹಿಂದೇಟು ಹಾಕುತ್ತಿವೆ. ಇದರಿಂದ ಹಣ ಪಾವತಿಸಿದವರು ತಲೆ ಮೇಲೆ ಕೈಹೊದ್ದು ಕುಳಿತುಕೊಳ್ಳುವಂತೆ ಮಾಡಿದೆ. 5-10 ಸಾವಿರ ರೂ. ಆದರೂ ಚಿಂತಿಸುತ್ತಿರಲಿಲ್ಲ. ಆದರೆ ಮೂರ್ನಾಲ್ಕು ಲಕ್ಷ ರೂ. ಕೊಟ್ಟಿದ್ದೇವೆ. ಇದೀಗ ಕರೊನಾ ಆತಂಕದಿಂದ ಮದುವೆ ರದ್ದುಪಡಿಸಿದ್ದೇವೆ. ಸರ್ಕಾರವೇ ಮದುವೆ ಮತ್ತಿತರ ಸಮಾರಂಭಗಳನ್ನು ಮುಂದೂಡುವಂತೆ ಸೂಚಿಸಿದೆ. ಆದರೂ ನಗರದ ಹೊರವಲಯದಲ್ಲಿರುವ ಕಲ್ಯಾಣ ಮಂದಿರ ಸಮಿತಿಯವರು ಮುಂಗಡ ನೀಡಿದ ಹಣ ವಾಪಸ್ ನೀಡುತ್ತಿಲ್ಲ ಎಂದು ಹೆಸರೇಳಲಿಚ್ಛಿಸದ ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು.

ಕರೊನಾ ವೈರಸ್​ಗಿಂತ ಕೆಎಫ್​ಡಿ ಭೀತಿ ಹೆಚ್ಚು: ಮಲೆನಾಡು ಜಿಲ್ಲೆಯ ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ಭಾಗದಲ್ಲಿ ಕೆಎಫ್​ಡಿ ಕಳೆದ ವರ್ಷದಿಂದ ತಾಂಡವವಾಡುತ್ತಿದೆ. ಪ್ರಸಕ್ತ ವರ್ಷ ಮೂವರು ಸೇರಿ ಇದುವರೆಗೆ 25ಕ್ಕೂ ಅಧಿಕ ಜನರು ಕೆಎಫ್​ಡಿಗೆ ಬಲಿಯಾಗಿದ್ದಾರೆ. ಹಾಗಾಗಿ ಮಲೆನಾಡಿನಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕರೊನಾ ವೈರಸ್​ಗಿಂತ ಕೆಎಫ್​ಡಿ ಭೀತಿಗೆ ಜನರಲ್ಲಿ ಹೆಚ್ಚಾಗಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೆಲ ಪ್ರಗತಿಪರರು ಹೋರಾಟ, ಪ್ರತಿಭಟನೆ ಕೂಡ ನಡೆಸಿದ್ದಾರೆ. ಆದರೂ ಇದುವರೆಗೂ ಕೆಎಫ್​ಡಿ ನಿವಾರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.

ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್: ಕೆಎಸ್​ಆರ್​ಟಿಸಿ, ಖಾಸಗಿ ಬಸ್ ನಿಲ್ದಾಣಗಳು ಹಾಗೂ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಬುಧವಾರ ಸಂಜೆಯಿಂದಲೇ ಥರ್ಮಲ್ ಸ್ಕ್ರೀನಿಂಗ್ ಆರಂಭಗೊಂಡಿದೆ. ನಗರದಿಂದ ಹೊರಹೋಗುವ ಮತ್ತು ನಗರಕ್ಕೆ ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ. ಇದುವರೆಗೂ ಯಾರಲ್ಲೂ ಕರೊನಾ ವೈರಸ್ ಸೋಂಕು ಪತ್ತೆಯಾಗಿಲ್ಲ. ಸ್ಕ್ರೀನಿಂಗ್ ತಪಾಸಣೆ ಇನ್ನೂ ಹಲವು ದಿನ ಮುಂದುವರಿಯುವ ಸಾಧ್ಯತೆ ಇದೆ.

ಕೇಂದ್ರ ಗ್ರಂಥಾಲಯಕ್ಕಿಲ್ಲ ಪ್ರವೇಶ: ಕರೊನಾ ಆತಂಕದಿಂದ ನಗರದ ಕೇಂದ್ರ ಗ್ರಂಥಾಲಯಕ್ಕೂ ನಿರ್ಬಂಧ ಹಾಕಲಾಗಿದ್ದು ಓದುಗರನ್ನು ಗ್ರಂಥಾಲಯದ ಒಳಗೆ ಬಿಡುತ್ತಿಲ್ಲ. ಪುಸ್ತಕಗಳನ್ನು ಮನೆಗೆ ಕೊಟ್ಟು ಕಳುಹಿಸಲಾಗುತ್ತಿದೆ. ಇದರಿಂದ ಪ್ರತಿದಿನ ಓದುಗರಿಂದ ತುಂಬಿರುತ್ತಿದ್ದ ಗ್ರಂಥಾಲಯ ಕಳೆದ ನಾಲ್ಕೈದು ದಿನಗಳಿಂದ ಸಂಪೂರ್ಣ ಖಾಲಿ ಖಾಲಿ. ಉಳಿದಂತೆ ಜಿಲ್ಲೆಯ ಇತರೆ ಭಾಗದಲ್ಲಿರುವ ಹಲವು ಗ್ರಂಥಾಲಯಗಳು ಸೇವೆ ಸ್ಥಗಿತಗೊಳಿಸಿವೆ.

ಕಾರ್ಖಾನೆ ಮಾಲೀಕರಿಗೆ ಡಿಸಿ ಖಡಕ್ಕೆ ಎಚ್ಚರಿಕೆ: ಶಿವಮೊಗ್ಗ: ಕೈಗಾರಿಕಾ ವಲಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದೇ ಒಂದು ಕರೊನಾ ಪ್ರಕರಣ ಪತ್ತೆಯಾದರೂ ಒಂದು ತಿಂಗಳು ಕಾರ್ಖಾನೆಗಳನ್ನು ಸ್ಥಗಿತಗೊಳಿಸುವುದಾಗಿ ಡಿಸಿ ಕೆ.ಬಿ.ಶಿವಕುಮಾರ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಾಗೂ ನಿಯಂತ್ರಣ ಕುರಿತು ತುರ್ತು ಸಭೆ ನಡೆಸಿದ ಅವರು, ಕೈಗಾರಿಕಾ ವಲಯಗಳಲ್ಲಿ ಕರೊನಾ ವೈರಸ್ ನಿಯಂತ್ರಣದ ಬಗ್ಗೆ ಜಾಗೃತರಾಗಿರುವಂತೆ ಸೂಚಿಸಿದ್ದಾರೆ. ಟ್ರಕ್ ಡ್ರೖೆವರ್, ಕಂಡಕ್ಟರ್ಸ್ ಮತ್ತು ವಿಜಿಟರ್ಸ್ ಒಳಗೊಂಡಂತೆ ಎಲ್ಲ ಹೊರಗಿನ ಸಂಪರ್ಕ ಖಡಿತಗೊಳಿಸಬೇಕು.

ಕಾರ್ಖಾನೆಯೊಳಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅದರ ವೆಚ್ಚವನ್ನು ಆಯಾ ಕಾರ್ಖಾನೆಗಳ ಆಡಳಿತ ಮಂಡಳಿ ವಹಿಸಿಕೊಳ್ಳಬೇಕು. ಕಡ್ಡಾಯವಾಗಿ ಹ್ಯಾಂಡ್-ವಾಷ್ ಮತ್ತು ಸ್ಯಾನಿಟೈಜರ್ ಬಳಕೆ ಮಾಡಬೇಕು. ಯಾವುದಾದರೂ ಕಾರ್ಖಾನೆಗಳಿಗೆ ಮಾಸ್ಕ್​ನ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಪಡೆದುಕೊಳ್ಳಬೇಕು. ಥರ್ಮಮೀಟರ್​ನಲ್ಲಿ ವ್ಯಕ್ತಿಗಳ ಉಷ್ಣತೆಯನ್ನು 2ರಿಂದ 3 ಗಂಟೆಗೊಮ್ಮೆ ಪರಿಶೀಲಿಸುವುದು ಸೇರಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸೂಚನೆಗಳನ್ನು ಎಲ್ಲ ಕಾರ್ಖಾನೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ, ಡಿ.ಎಸ್.ಅರುಣ್. ಪಿ.ರುದ್ರೇಶ್, ಬಿ.ಗೋಪಿನಾಥ್, ಎಸ್.ಎಸ್.ಉದಯ್ಕುಮಾರ್, ಬಿ.ಆರ್.ಸಂತೋಷ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net