ಕರೊನಾ ನಿಯಮ ಪಾಲನೆ ಕಡ್ಡಾಯ, ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆ ನಿರ್ದೇಶಕ ಅಪ್ಪಸಾಹೇಬ್ ಸೂಚನೆ

07 Nela Ph 01 Director Visit
Published on

ನೆಲಮಂಗಲ: ನಗರದ ಸಾರ್ವಜನಿಕ ಆಸ್ಪತ್ರೆಗೆ ಗ್ರಾಮಾಂತರ ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆ ನಿರ್ದೇಶಕ ಅಪ್ಪಸಾಹೇಬ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆ ಜನರಲ್ ವಾರ್ಡ್, ಕೋವಿಡ್ ವಾರ್ಡ್, ಹೊರರೋಗಿಗಳ ಆರೋಗ್ಯ ತಪಾಸಣಾ ಕೊಠಡಿ ಹಾಗೂ ಔಷಧ ಮಳಿಗೆ ಪರಿಶೀಲನೆ ನಡೆಸಿ ಬಳಿಕ ವೈದ್ಯಾಧಿಕಾರಿಗಳೊಂದಿಗೆ ಆಸ್ಪತ್ರೆಯಲ್ಲಿನ ಸಮಸ್ಯೆ ಹಾಗೂ ಕರೊನಾ ಸೋಂಕು ಪರೀಕ್ಷೆ, ಲಸಿಕೆ ವಿತರಣೆ ಕುರಿತಾದ ಮಾಹಿತಿ ಸಂಗ್ರಹಿಸಿದರು.

ಕರೊನಾ ಮೂರನೇ ಬಗ್ಗೆ ಕೆಲ ತಜ್ಞರು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕಚೇರಿಯಲ್ಲಿ ಅಧಿಕಾರಿಗಳು ತಪ್ಪದೆ ಕೋವಿಡ್ ನಿಯಮ ಪಾಲನೆ ಮಾಡಬೇಕು. ಬಳಿಕ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲಾ ್ಲಆರೋಗ್ಯಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಅಪ್ಪಸಾಹೇಬ್ ತಿಳಿಸಿದರು.

ಕರೊನಾ 3ನೇ ಅಲೆ ತಡೆಗೆ ಸಿದ್ಧತೆ: ಕರೊನಾ 3ನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದ ಹಿನ್ನೆಲೆ ಜಿಲ್ಲೆಯಾದ್ಯಂತ ಮಕ್ಕಳ ಪರೀಕ್ಷೆ ಮಾಡಲಾಗಿದ್ದು, ಶೇ.10 ಮಕ್ಕಳಲ್ಲಿ ಸೋಂಕು ಪತ್ತೆಯಾಗುತ್ತಿದೆ. ಆದ್ದರಿಂದ ಪ್ರತಿಯೊಂದು ತಾಲೂಕು ಕೇಂದ್ರದಲ್ಲಿ ಜಿಲ್ಲಾಡಳಿತದಿಂದ ಮಕ್ಕಳ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲಾಗುತ್ತಿದೆ ಎಂದು ಅಪ್ಪಸಾಹೇಬ್ ತಿಳಿಸಿದರು.

ಮೂರನೇ ಅಲೆ ನಿಯಂತ್ರಣಕ್ಕೆ ಅಧಿಕಾರಿಗಳು ಸಜ್ಜಾಗಿದ್ದು, ಸರ್ಕಾರದಿಂದ ಆಕ್ಸಿಜನ್ ಪ್ಲಾಂಟ್ ಹಾಗೂ ಕೆಲ ವೈದ್ಯಕೀಯ ಯಂತ್ರೋಪಕರಣ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸುತ್ತಿದೆ. ಜತೆಗೆ ತಾಲೂಕಿನ ಮೈಲನಹಳ್ಳಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಆಸ್ಪತ್ರೆ ನಿರ್ಮಾಣ ಕಾರ್ಯ ಶೀಘ್ರವೇ ಆರಂಭಿಸಲಾಗುವುದು ಎಂದು ತಿಳಿಸಿದರು.

ಅಧಿಕಾರಿಗಳಿಗೆ ತರಾಟೆ: ಆಸ್ಪತ್ರೆಯ ಹೊರಭಾಗ ಹಾಗೂ ಒಳಭಾಗದಲ್ಲಿ ಕಸದ ರಾಶಿಯನ್ನು ಕಂಡ ಅಪ್ಪಸಾಹೇಬ್, ವೈದ್ಯಾಧಿಕಾರಿಗಳನ್ನು ತರಾಟೆ ತಗೆದುಕೊಂಡರು. ಆಸ್ಪತ್ರೆ ದೇವಾಲಯವಿದ್ದಂತೆ. ಸಮರ್ಪಕ ಸ್ವಚ್ಛತೆ ನಿರ್ವಹಣೆಯಾಗಬೇಕು. ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಮೆಡಿಕಲ್ ವೇಸ್ಟ್ ವಿಲೇವಾರಿ ಸಮರ್ಪಕವಾಗಿ ಆಗಬೇಕಿದೆ ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ನರಸಿಂಹಯ್ಯ, ವೈದ್ಯರಾದ ವಿನಯ್‌ಪ್ರಸಾದ್, ನಾಗೇಶ್, ವಿನಯ್, ಸೋನಿಯಾ, ಶಾಂತಲಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net