

ಶಿವಮೊಗ್ಗ: ಸರ್ಕಾರಿ ನೌಕರರು ಪ್ರತಿದಿನವೂ ತೀವ್ರ ಸಂಕಷ್ಟದಲ್ಲಿ ಸೋಂಕು ಪೀಡಿತರ ನಡುವೆಯೇ ಕಾರ್ಯನಿರ್ವಹಿಸುತ್ತಿರುವುದರಿಂದ ಮುಂಜಾಗ್ರತೆ ವಹಿಸುವುದು ಅತ್ಯಗತ್ಯ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಶಿವಮೊಗ್ಗದ ಜಿಲ್ಲಾ ಶಾಖೆ ಕಚೇರಿಯಲ್ಲಿ ಕರೊನಾ ವೈರಾಣುವಿನ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ಮುಖಗವಸು ವಿತರಿಸಿ ಮಾತನಾಡಿದರು.
ಎಷ್ಟೇ ಜಾಗ್ರತೆ ವಹಿಸಿದರೂ ಸೋಂಕು ಯಾವಾಗ ಅಂಟಿಕೊಳ್ಳುತ್ತದೆ ಎಂದು ಊಹಿಸುವುದು ಕಷ್ಟ. ಹಾಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಳಪೆ ಮುಖಗವಸುಗಳನ್ನು ಖರೀದಿಸಿ ನಮ್ಮ ನೌಕರರು ತಮ್ಮನ್ನು ತೊಂದರೆಗೀಡು ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ ಜಿಲ್ಲೆಯ ಸರ್ಕಾರಿ ನೌಕರರಿಗೆ ಮಾರುಕಟ್ಟೆಗಿಂತ ಶೇ.60ಕ್ಕಿಂತ ಕಡಿಮೆ ದರದಲ್ಲಿ ಐಎಸ್ಒ ದೃಢೀಕೃತ ಎನ್95 ಮುಖಗವಸು ವಿತರಿಸಲಾಗುತ್ತಿದೆ ಎಂದರು.
ಆಯುಷ್ ಇಲಾಖೆ ಹಿರಿಯ ವೈದ್ಯಾಧಿಕಾರಿ ಡಾ. ಸಿ.ಎ.ಹಿರೇಮಠ ಮಾತನಾಡಿ, ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸುತ್ತಾರೆಂದು ಕಾಟಾಚಾರಕ್ಕೆ ಮುಖಗವಸು ಹಾಕಿಕೊಳ್ಳುವುದರಿಂದ ಮೂಲ ಉದ್ದೇಶ ಈಡೇರುವುದಿಲ್ಲ. ಹಾದಿಬೀದಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಮುಖಗವಸುಗಳನ್ನು ಧರಿಸುವುದರಿಂದ ವ್ಯಾಪಾರಿಗೆ ಲಾಭವೇ ಹೊರತು ಜನರಿಗಲ್ಲ ಎಂದು ಹೇಳಿದರು.
ರಾಜ್ಯ ಆಯುಷ್ ವೈದ್ಯಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಜೆ.ಈರಣ್ಣ, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನಕುಮಾರ್, ಜಿ.ಎಂ.ದಿನೇಶ್, ಪಾಪಣ್ಣ, ನರಸಿಂಹಮೂರ್ತಿ, ಹನುಮಂತಪ್ಪ ಇತರರಿದ್ದರು.